ಕಡಬ: ಕಡಬ ಗ್ರಾಮದ ಸಂತೆಕಟ್ಟೆ ಬಳಿ ಇರುವ ಮೀನು ಮಾರಾಟಕಟ್ಟೆಯಲ್ಲಿ ಮೀನು ಮಾರಾಟದ ವಿಚಾರದಿಂದ ಶುರುವಾದ ವಾಗ್ವಾದವು ಕೊನೆಗೆ ಹೊಡೆದಾಟಕ್ಕೆ ತಿರುಗಿ, ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ನವೆಂಬರ್ 1 ರಂದು ಬೆಳಿಗ್ಗೆ ನಡೆದಿದೆ.
ಮೀನು ಮಾರಾಟದ ವಿಚಾರದಲ್ಲಿ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬವರ ಎರಡು ಅಂಗಡಿಗಳ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಇಬ್ಬರ ಪರಸ್ಪರ ಹೊಡೆದಾಟ ನಡೆದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಕುರಿತು ಕಡಬ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅಭಿನಂದನ್ ಎಂ.ಎಸ್. ರವರು ವಿಡಿಯೋ ಪರಿಶೀಲನೆ ನಡೆಸಿದ ವೇಳೆ, ಸಾರ್ವಜನಿಕ ಸ್ಥಳದಲ್ಲಿ ರಾಜು ಮ್ಯಾಥ್ಯೂ, ಆದಂ, ಫಯಾಜ್, ರಕ್ಷೀತ್ ಮಾಣಿ ಹಾಗೂ ನೌಫಾಲ್ ಎಂಬವರು ಪರಸ್ಪರ ಹೊಡೆದಾಟ ನಡೆಸಿರುವುದು ದೃಢಪಟ್ಟಿದೆ.
ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ ಆರೋಪದ ಮೇಲೆ ಮೇಲ್ಕಂಡ ಐವರು ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 73/2025, ಕಲಂ 194(2) ಬಿ.ಎನ್.ಎಸ್.–2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
Post a Comment