ಮೂಡುಬಿದಿರೆ: ಉಡುಪಿ–ಕಾಸರಗೋಡು 440 ಕೆ.ವಿ ವಿದ್ಯುತ್ ಲೈನ್ ಕಾಮಗಾರಿಯ ವೇಳೆ ರೈತರ ಕೃಷಿ ನಾಶ ಮಾಡಿದಷ್ಟೇ ಅಲ್ಲದೆ, ಪೊಲೀಸ್ ಬಲ ಬಳಸಿ ರೈತರ ಮೇಲೆ ದೌರ್ಜನ್ಯ ನಡೆಸಿದ ಸ್ಟರ್‌ಲೈಟ್ ಕಂಪನಿಯ ವಿರುದ್ಧ ಶನಿವಾರ ಅಶ್ವತ್ಥಪುರದಲ್ಲಿ ರೈತರು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅಶ್ವತ್ಥಪುರ ಸೀತಾರಾಮ ದೇವಸ್ಥಾನದಿಂದ ರೈತರು ಜಮಾವಣೆಗೊಂಡು ಜಾಥಾ ನಡೆಸಿ ಒಂಟಿಮಾರ್ ಪ್ರದೇಶದ ಬೆಳೆ ಹಾನಿಗೊಳಗಾದ ರೈತ ಭಾಸ್ಕರ ಶೆಟ್ಟಿ ಅವರ ಜಮೀನಿನವರೆಗೆ ತಲುಪಿದರು. ಬಳಿಕ ಅವರ ನಿವಾಸದಲ್ಲಿ ಸಭೆ ನಡೆಯಿತು.
ಜಾಥಾಕ್ಕೆ ಚಾಲನೆ ನೀಡಿದ ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಅವರು ಮಾತನಾಡಿ, “ಅವಿಭಜಿತ ದ.ಕ–ಉಡುಪಿ ಜಿಲ್ಲೆಯಲ್ಲಿ ರೈತ ವಿರೋಧಿ ಕಂಪನಿಗಳ ವಿರುದ್ಧ ಹೋರಾಟಗಳು ಪ್ರಾರಂಭಿಕ ಹಂತದಲ್ಲಿವೆ. ಕಂಪನಿಗಳು ಹೋರಾಟವನ್ನು ಹಣ, ಭೂಮಿ ಆಮಿಷ ನೀಡಿ ಹತ್ತಿಕ್ಕಲು ಯತ್ನಿಸುತ್ತವೆ. ಸರ್ಕಾರಗಳು ಈ ಜಿಲ್ಲೆಯನ್ನು ಕಸದ ಬುಟ್ಟಿಯಂತೆ ಕಾಣುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ಮುಂದುವರಿದು, “ರೈತನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಕೃಷಿ ನಾಶವಾದರೆ ಮನುಕುಲದ ಜೊತೆಗೆ ಪ್ರಾಣಿ–ಪಕ್ಷಿ ಸಂಕುಲವೂ ನಾಶವಾಗುತ್ತದೆ,” ಎಂದು ಆತಂಕ ವ್ಯಕ್ತಪಡಿಸಿದರು. ಬಳಿಕ ಕಟೀಲು ದೇವಳದ ಅನುವಂಶಿಕ ಅರ್ಚಕ ಅನಂತ ಅಸ್ರಣ್ಣ ಹಾಗೂ ರೈತ ಮುಖಂಡ ನಾರಾಯಣ ಸ್ವಾಮಿ ಅವರು ಮಾತನಾಡಿದರು.
ನಾರಾಯಣ ಸ್ವಾಮಿ ಮಾತನಾಡಿ, “ಒಬ್ಬ ರೈತನ ಸಮಸ್ಯೆ ಎಲ್ಲ ರೈತರ ಸಮಸ್ಯೆ. ರೈತರ ಅನುಮತಿಯಿಲ್ಲದೆ ಸರ್ಕಾರ ಕಂಪನಿಗಳಿಗೆ ಕೃಷಿಭೂಮಿಗೆ ದಾಳಿ ಮಾಡಲು ಅವಕಾಶ ನೀಡಿದೆ. ರೈತರು ಒಂದು ಇಂಚೂ ಜಮೀನು ಬಿಡುವುದಿಲ್ಲ,” ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ರಾಜ್ಯ ರೈತ ಸಂಘದ ಮುಖಂಡರು ಸುಚರಿತ ಶೆಟ್ಟಿ, ಕೃಷ್ಣ ಪ್ರಸಾದ್ ತಂತ್ರಿ, ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಪ್ರವೀಣ್ ಭಂಡಾರಿ, ವಸಂತ ಭಟ್, ರವಿರಾಜ್, ಸುರೇಶ್ ಶೆಟ್ಟಿ ದೋಟ, ಬಾಲಕೃಷ್ಣ ದೇವಾಡಿಗ, ಅಲ್ಫೋನ್ಸ್ ನಿಡ್ಡೋಡಿ, ಇನ್ನಾ ಚಂದ್ರಹಾಸ ಶೆಟ್ಟಿ, ಹೊನ್ನಪ್ಪಗೌಡ, ಕೃಷ್ಣಮೂರ್ತಿ, ಜಾಕಿಂ ಪಿಂಟೊ, ಸುದೇಶ್ ದೇವಾಡಿಗ, ಹರೀಶ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.
Post a Comment