ಉಳ್ಳಾಲ : ಶಾಲಾ ಮಕ್ಕಳಿಗೆ ತುಳು ಭಾಷಾ ಕಲಿಕೆ ಮತ್ತು ಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ "ಡೆನ್ನ ಡೆನ್ನಾನ-ಪದ ಪನ್ಕನ" ಕಾರ್ಯಕ್ರಮ ಅಭಿಯಾನವು ಮಹತ್ವಪೂರ್ಣವಾಗಿದ್ದು, ಮಕ್ಕಳಲ್ಲಿ ತುಳುವಿನ ಸಾಹಿತ್ಯ ಹಾಗೂ ಹಾಡುಗಳ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆಯೆಂದು ಏಕಲವ್ಯ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಭಾಸ್ಕರ ತೊಕ್ಕೊಟ್ಟು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸರಕಾರಿ ಪ್ರೌಢಶಾಲೆ ಬಬ್ಬುಕಟ್ಟೆಯ ಜಂಟಿ ಆಶ್ರಯದಲ್ಲಿ ಬಬ್ಬುಕಟ್ಟೆ ಶಾಲೆಯಲ್ಲಿ ಗುರುವಾರ ನಡೆದ ತುಳು ಹಾಡುಗಳ ಕಲಿಕಾ ಕಾರ್ಯಾಗಾರ ಮತ್ತು ಹಾಡುಗಳ ಪ್ರಸ್ತುತಿ"ಡೆನ್ನ ಡೆನ್ನಾನ - ಪದ ಪನ್ಕನ"ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಳು ಭಾಷೆಯನ್ನ ಉಳಿಸಿ ಬೆಳೆಸದಿದ್ದರೆ ಮುಂದಿನ ನಲ್ವತ್ತು, ಐವತ್ತು ವರುಷಗಳಲ್ಲಿ ತುಳು ಭಾಷೆಯು ಸಂಪೂರ್ಣವಾಗಿ ನೇಪತ್ಯಕ್ಕೆ ಸರಿಯಬಹುದು. ಎಪ್ಪತ್ತು,ಎಂಭತ್ತರ ದಶಕದಲ್ಲಿ ತುಳುವರಲ್ಲಿ ಕಾಸಿಲ್ಲದಿದ್ದರೂ ಸಹ ಸುಂದರ ಕಥಾ ಹಂದರವುಳ್ಳ ತುಳು ಚಲನ ಚಿತ್ರಗಳನ್ನ ನಿರ್ಮಿಸುತ್ತಿದ್ದರು. ಅಂದಿನ ತುಳು ಚಲನಚಿತ್ರಗಳ ಅರ್ಥಗರ್ಭಿತ ಸಾಹಿತ್ಯಗಳು ಇಂಪಾದ ಹಾಡುಗಳಂತೂ ಸರ್ವಕಾಲಿಕವಾಗಿ ಮೆಚ್ಚುಗೆ ಪಡೆಯುವಂತದ್ದಾಗಿದೆ. ನಾನು ದೇಹಧಾರ್ಡ್ಯ ಸ್ಪರ್ಧೆಗೆಂದು ಅನೇಕ ಬಾರಿ ವಿದೇಶಗಳಿಗೆ ತೆರಳಿದ್ದೇನೆ. ವಿದೇಶಗಳಲ್ಲಿ ತುಳುವರು ಮಾತಿಗೆ ಸಿಕ್ಕಾಗ ಸಂತೋಷ ಬೇರೆಯೇ ಆಗಿರುತ್ತಿತ್ತು. ಇಂದಿನ ಮಕ್ಕಳೇ ತುಳು ಭಾಷೆಯನ್ನ ಮುಂದಿನ ತಲೆಮಾರಿಗೆ ವಿಸ್ತರಿಸಬೇಕಿದೆ.ಶಾಲಾ ಮಕ್ಕಳಲ್ಲಿ ತುಳು ಭಾಷಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಮಹತ್ವಪೂರ್ಣವಾಗಿದೆ ಎಂದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳನ್ನಾಡಿ.
ಹಿಂದೆ ಶಾಲೆಯಲ್ಲಿ ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಮಾತನಾಡುವಾಗ ಶಿಕ್ಷಕರು ಮಕ್ಕಳನ್ನ ಗದರುತ್ತಿದ್ದರು ಆದರೆ ಇಂದು ಬದಲಾದ ಕಾಲಘಟ್ಟದಲ್ಲಿ ಶಾಲೆಗಳಲ್ಲೂ ತುಳುವಿಗೆ ಪ್ರಾಧಾನ್ಯತೆ ಲಭಿಸುವಂತಾಗಿದೆ. ಕಳೆದ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 847 ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ತುಳು ಭಾಷೆಯನ್ನ ಆಯ್ಕೆ ಮಾಡಿ ಪರೀಕ್ಷೆ ಬರೆದಿದ್ದು 847 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಅದರಲ್ಲಿ 317 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳು ಇಂದು ಕಲಿತ ತುಳು ಹಾಡುಗಳನ್ನ ಶಾಲಾ ವಾರ್ಷಿಕೋತ್ಸವದಂದು ಹಾಡಿ ತುಳು ಭಾಷೆಯನ್ನ ಉಳಿಸಿ ಬೆಳೆಸುವ ಕಾರ್ಯ ನಡೆಸಬೇಕಿದೆ ಎಂದರು.
ಹಿರಿಯ ಸಾಮಾಜಿಕ ಕಾರ್ಯಕರ್ತೆ ಸುಹಾಸಿನಿ ಬಬ್ಬುಕಟ್ಟೆ,ಉಳ್ಳಾಲ ನಗರಸಭಾ ಸದಸ್ಯರಾದ ಮುಶ್ತಾಕ್ ಪಟ್ಲ,ಬಬ್ಬುಕಟ್ಟೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಖೈರುನ್ನೀಸ ,ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಬೂಬ ಪೂಜಾರಿ ಮಳಲಿ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ನಾಯಕ್ ಸ್ವಾಗತಿಸಿದರು. ಶಿಕ್ಷಕರಾದ ದುರ್ಗಲತಾ ವಂದಿಸಿದರು. ಜ್ಯೋತಿ ನಿರೂಪಿಸಿದರು.
ಗಾಯಕ,ಸಂಗೀತ ನಿರ್ದೇಶಕರಾದ ತೋನ್ಸೆ ಪುಷ್ಕಳ್ ಕುಮಾರ್ ಮತ್ತು ಗಾಯಕಿ,ಸಂಗೀತ ಶಿಕ್ಷಕಿ ವಾಣಿ ಸಪ್ರೆ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಬಬ್ಬುಕಟ್ಟೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತುಳು ಹಾಡುಗಳ ಸಮೂಹ ಗಾಯನಗಳನ್ನು ಪ್ರಸ್ತುತಿ ಪಡಿಸಿದರು.
Post a Comment