Top News

ಮಂಗಳೂರು : ವಿಶೇಷ ಶಾಲೆಗಳ ಗೌರವಧನ 40% ಏರಿಕೆ ಪ್ರಸ್ತಾವನೆ ಮಂಜೂರಾತಿಗಾಗಿ ಸ್ಪೀಕರ್‌ಗೆ ಮನವಿ

ಮಂಗಳೂರು : ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘ (ನೋಂ) ಮತ್ತು ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ಪ್ರತಿನಿಧಿಗಳು ವಿಧಾನಸಭಾ ಅಧ್ಯಕ್ಷ ಡಾ. ಯು. ಟಿ. ಖಾದರ್ ಫರೀದ್ ಅವರಿಗೆ ಮನವಿ ಸಲ್ಲಿಸಿ, ವಿಶೇಷ ಶಾಲೆಗಳ ಗೌರವಧನವನ್ನು 40% ಏರಿಕೆ ಮಾಡುವ ಪ್ರಸ್ತಾವನೆಗೆ ಮಂಜೂರಾತಿ ಒದಗಿಸಿಕೊಡಲು ವಿನಂತಿಸಿದರು.

ವಿಧಾನಸೌಧದಲ್ಲಿ ನಡೆದ ಎರಡು ಮಹತ್ವದ ಸಭೆಗಳಲ್ಲಿ, ವಿಧಾನಸಭಾಧ್ಯಕ್ಷರ ಉಪಸ್ಥಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಸಂಬಂಧಿತ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯ ಹಿನ್ನೆಲೆಯಲ್ಲಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚನೆ ಆಗಿ, ತಿರುಕೇಂದ್ರಿಕೃತ ಸಹಾಯ ಯೋಜನೆಯಡಿ ರಾಜ್ಯದ ವಿಶೇಷ ಶಾಲೆಗಳಿಗೆ ನೀಡುವ ಅನುದಾನವನ್ನು 40% ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.


ಆದಾಗ್ಯೂ, ಈ ಪ್ರಸ್ತಾವನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಕಳುಹಿಸಲ್ಪಟ್ಟ ನಂತರ, ಆರ್ಥಿಕ ಇಲಾಖೆ ಅದನ್ನು ಹಿಂತಿರುಗಿಸಿರುವುದು ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ, ಸಂಘದ ಪ್ರತಿನಿಧಿಗಳು 40% ಏರಿಕೆಯ ಗೌರವಧನ ಪ್ರಸ್ತಾವನೆಗೆ ತಕ್ಷಣ ಮಂಜೂರಾತಿ ನೀಡುವಂತೆ ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದವರಲ್ಲಿ ಡಾ.ಕಾಂತಿ ಹರೀಶ್, ಆಗ್ನೆಸ್ ಕುಂದರ್, ಡಾ. ವಸಂತ್  ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Post a Comment

Previous Post Next Post