ಮಂಗಳೂರು : ಸಮಾಜದಲ್ಲಿರುವ ವಿಶೇಷಚೇತನರಿಗೆ ಅನುಕಂಪದ ಜೊತೆಗೆ ಪ್ರೀತಿಯನ್ನು ತೋರಿಸಬೇಕು. ಪ್ರತಿಯೊಬ್ಬ ವಿಶೇಷಚೇತನರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಉದ್ಯಮಿ ಗಣೇಶ್ ಶೆಟ್ಟಿ ಹೇಳಿದರು.
ಅವರು ಬುಧವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಂಗಳೂರು ಹಾಗೂ ಲಯನ್ಸ್ ಕ್ಲಬ್, ಗಾಂಧಿ ನಗರ ಮತ್ತು ಶಿಶು ಕೇಂದ್ರೀಕೃತ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ವಿಕಲಾಂಗ ಚೇತನರ ಸಮಾನ ಪಾತ್ರದ ಮಹತ್ವವನ್ನು ಅರಿತುಕೊಳ್ಳಬೇಕು. ಮಕ್ಕಳಲ್ಲಿ ವಿಶೇಷಚೇತನ ಮಕ್ಕಳ ಬಗ್ಗೆ ತಾತ್ಸಾರ ಮನೋಭಾವನೆ ಬೆಳೆಯದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ. ಎಲ್ಲರೂ ವಿಶೇಷಚೇತನ ಮಕ್ಕಳಿಗೆ ಅಥವಾ ವಿಶೇಷ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು. ವಿಶೇಷ ಚೇತನರ ಆರೈಕೆಯು ಮಹತ್ವದ ಸೇವೆಯಾಗಿದ್ದು, ಅನೇಕರು ಅವರ ಸೇವೆ ಮಾಡುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯವಾದಿ ಮಾನಸ ಹೆಗ್ಡೆ ಮಾತನಾಡಿ, ವಿಶೇಷ ಚೇತನರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಇರಬೇಕು. ವಿಶೇಷ ಚೇತನರಿಗೆ ದೈಹಿಕವಾಗಿ ಅಥವಾ ಮಾನಸಿಕವಾಗಿ ತೊಂದರೆ ಉಂಟಾದರೆ ಕಾನೂನಿನ ನೆರವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸಾಧನೆಗೈದ ವಿಶೇಷಚೇತನ ಮಕ್ಕಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಗಾಂಧಿನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ್ ಉಳ್ಳಾಲ್, ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಕೆ.ಎಂ, ಉದ್ಯಮಿ ಬಾಲಕೃಷ್ಣ ಕೊಟ್ಟಾರಿ, ಅಶೋಕ್ ದೇವಾಡಿಗ, ಮಾಜಿ ಮೇಯರ್ ಮಹಾಬಲ ಮಾರ್ಲ ಮತ್ತಿತರರು ಉಪಸ್ಥಿತರಿದ್ದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿಕಲಚೇತನರ ಕಲ್ಯಾಣಾಧಿಕಾರಿ ಮನೀಶ್ ನಾಯಕ್ ಸ್ವಾಗತಿಸಿ, ಶಕ್ತಿನಗರ ಸಾನಿಧ್ಯ ವಿಶೇಷ ಶಾಲೆ ಆಡಳಿತಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Post a Comment