Top News

ಕುಖ್ಯಾತ ಅಂತರ್‌ರಾಜ್ಯ ವಾಹನ ಹಾಗೂ ಸರಗಳ್ಳನನ್ನು ಬಂಧಿಸಿದ ಮಂಗಳೂರು ನಗರ ಪೊಲೀಸರು ; ಸರಗಳು ಹಾಗೂ ದ್ವಿಚಕ್ರ ವಾಹನಗಳು ವಶಕ್ಕೆ

ಮಂಗಳೂರು : ವಯೋವೃದ್ದರು ಮತ್ತು ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರ ಕಸಿದುಕೊಳ್ಳುವುದು ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಅಂತರ್‌ರಾಜ್ಯ ಕುಖ್ಯಾತ ಕಳ್ಳನನ್ನು ಮಂಗಳೂರು ನಗರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯಿಂದ ನಾಲ್ಕು ದ್ವಿಚಕ್ರ ವಾಹನಗಳು ಹಾಗೂ ಎರಡು ಚಿನ್ನದ ಸರಗಳು ಸೇರಿದಂತೆ ಸುಮಾರು 5 ಲಕ್ಷ ರೂ. ಮೌಲ್ಯದ ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನವೆಂಬರ್ 21ರಂದು ಕದ್ರಿ ಬಟ್ಟಗುಡ್ಡೆ ಬಳಿ ಮನೆಯ ಓಣಿಯಲ್ಲಿದ್ದ 83 ವರ್ಷದ ಮಹಿಳೆಯ ಚಿನ್ನದ ಸರವನ್ನು ದ್ವಿಚಕ್ರ ವಾಹನದಲ್ಲಿ ಬಂದು ಕಸಿದುಕೊಂಡು ಹೋಗಿದ್ದ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ವಿಶೇಷ ತಂಡ ರಚಿಸಿದ್ದರು. ತನಿಖೆಯ ಹಲವು ಆಯಾಮಗಳ ಪರಿಶೀಲನೆಯ ಮಧ್ಯೆ, ಡಿಸೆಂಬರ್ 4ರಂದು ಕದ್ರಿ ಜೋಗಿಮಠದ ಬಳಿಯಲ್ಲಿ ವಾಹನ ತಪಾಸಣೆಯಲ್ಲಿ ಸಂಶಯಾಸ್ಪದವಾಗಿ ಬಂದಿದ್ದ KA19 HC 6946 ಸಂಖ್ಯೆಯ ಬೈಕನ್ನು ತಡೆದು ಪರಿಶೀಲಿಸಿದಾಗ, ಅದು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ ವಾಹನ ಎನ್ನುವುದು ಬೆಳಕಿಗೆ ಬಂತು.

ಪೊಲೀಸರ ವಿಚಾರಣೆಯಲ್ಲಿ ಆರೋಪಿಯು ಕಳ್ಳತನದ ವಾಹನಗಳನ್ನು ಬಳಸಿಕೊಂಡು ವಯೋವೃದ್ದರು ಹಾಗೂ ಒಂಟಿ ಮಹಿಳೆಯರನ್ನು ಗುರಿ ಮಾಡಿಕೊಂಡು ಸರಗಳ್ಳತನ ಮಾಡುತ್ತಿದ್ದ ವಿಚಾರ ಬಹಿರಂಗಗೊಂಡಿದೆ. ಬಂಧಿತ ಆರೋಪಿಯನ್ನು ಡಿಸೆಂಬರ್ 5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೂವರು ದಿನಗಳ ಪೊಲೀಸ್ ವಶಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.

ಬಂಧಿತನನ್ನು ಆದಿತ್ ಗೋಪಾನ್ @ ಮುತ್ತು ಕೃಷ್ಣ (ವಯಸ್ಸು 32, ನಿವಾಸ: ತಿರುವನಂತಪುರಂ, ಕೇರಳ) ಎಂದು ಗುರುತಿಸಲಾಗಿದೆ. ಬೈಂದೂರು, ಕುಂದಾಪುರ ಮತ್ತು ಸುರತ್ಕಲ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಹಾಗೂ ಮುಲ್ಕಿಯಲ್ಲಿ ಚೂರಿ ತೋರಿಸಿ ಒಂಟಿ ಮಹಿಳೆಯಿಂದ ಚಿನ್ನದ ಸರ ಕಸಿದುಕೊಂಡ ಪ್ರಕರಣ ಸೇರಿ ಹಲವು ಅಪರಾಧಗಳಲ್ಲಿ ಇವನು ನೇರವಾಗಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಅಲ್ಲದೆ ತಮಿಳುನಾಡಿನಲ್ಲಿ ಮನೆ ಕಳ್ಳತನ ಸಂಬಂಧ ನಾಲ್ಕು ಪ್ರಕರಣಗಳಲ್ಲಿ ಬಂಧಿತನಾಗಿದ್ದ ಇವನು, ನಾಗರಕೋಯಿಲ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ ಬಳಿಕ ರೈಲು ಮೂಲಕ ಭಾರತದೆಲ್ಲೆಡೆ ಸಂಚರಿಸಿ, ರೈಲು ನಿಲ್ದಾಣಗಳ ಬಳಿ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡಿ ಸುಲಿಗೆ ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣವನ್ನು ಮಂಗಳೂರು ಪೂರ್ವ ಠಾಣೆ ನಿರೀಕ್ಷಕ ಅನಂತ ಪದ್ಮಾನಾಭ ಅವರ ನೇತೃತ್ವದಲ್ಲಿ ಕದ್ರಿ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಮಾಹಿತಿಯಂತೆ, 2025ರಲ್ಲಿ ನಗರ ವ್ಯಾಪ್ತಿಯಲ್ಲಿ ದಾಖಲಾದ 72 ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ 57 ವಾಹನಗಳನ್ನು ಈಗಾಗಲೇ ಪತ್ತೆ ಮಾಡಲಾಗಿದ್ದು, ಉಳಿದ 15 ಪ್ರಕರಣಗಳ ತನಿಖೆ ಮುಂದುವರಿದಿದೆ. ನಗರದಲ್ಲಿ ಕಳವಾದ ಬೈಕ್‌ ಪತ್ತೆ ಪ್ರಮಾಣ ಶೇಕಡಾ 79ಕ್ಕೆ ಏರಿದೆ.

Post a Comment

Previous Post Next Post