ಸುರತ್ಕಲ್: ಇಲ್ಲಿನ ಬಾರೊಂದರ ಬಳಿ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರ ಮೇಲೆ ಇರಿತ ನಡೆಸಿದ ಘಟನೆ ನಡೆದಿದೆ.
ಮುಖೀದ್ ಇರಿತಕ್ಕೊಳಗಾದವರು. ಮುಖೀದ್ ನಿಜಾಮ್ ಹಾಗೂ ಇತರ ಇಬ್ಬರೊಂದಿಗೆ ಬಾರ್‌ಗೆ ತೆರಳಿ ಮದ್ಯ ಸೇವಿಸುತ್ತಿದ್ದರು. ಅಲ್ಲಿ ಮದ್ಯಪಾನ ಮಾಡುತ್ತಿದ್ದ ನಾಲ್ವರು ಅಪರಿಚಿತರು ಇವರೊಂದಿಗೆ ವಾಗ್ವಾದ ನಡೆಸಿದ್ದು, ಬಾರ್‌ನಿಂದ ಹೊರಬಂದ ನಂತರವೂ ವಾಗ್ವಾದ ಮುಂದುವರೆದಿದೆ.
ಈ ವೇಳೆ ಒಬ್ಬ ಆರೋಪಿ ಚಾಕು ತೆಗೆದುಕೊಂಡು ನಿಝಾಮ್‌ನ ಹೊಟ್ಟೆ ಮತ್ತು ಕಿವಿಯ ಬಳಿ ಇರಿದಿದ್ದಾನೆ. ಮುಖೀದ್ ಕೈಗೂ ಗಾಯವಾಗಿದೆ. ಗಾಯವು ಆಳವಾಗಿಲ್ಲದ ಕಾರಣ ಮುಖೀದ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪರಿಚಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ 307ನೇ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಸುರತ್ಕಲ್‌ನ ರೌಡಿ ಶೀಟರ್ ಮತ್ತು ಬಜರಂಗದಳದ ಸಕ್ರಿಯ ಕಾರ್ಯಕರ್ತ ಗುರುರಾಜ್, ಅವನ ಸ್ನೇಹಿತ ಅಲೆಕ್ಸ್ ಸಂತೋಷ್, ಸುಶಾಂತ್ ಮತ್ತು ನಿತಿನ್ ಎಂದು ಗುರುತಿಸಲಾಗಿದೆ.
ಪೊಲೀಸರು ರಾತ್ರಿ ಆರೋಪಿಗಳ ಅಡಗಿದ್ದ ಸ್ಥಳಕ್ಕೆ ತೆರಳಿದರೂ ಅವರು ಆಗಲೇ ಪರಾರಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಪೊಲೀಸ್ ಕಮಿಷನರ್ ಆಸ್ಪತ್ರೆ ಭೇಟಿ ನೀಡಿ ತನಿಖೆ ಪರಿಶೀಲಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
Post a Comment