Top News

ಸಭಾಧ್ಯಕ್ಷರ ಕಚೇರಿಯಲ್ಲಿ ಕೋಟ್ಯಾಂತರ ಭ್ರಷ್ಟಾಚಾರ; ಹೈಕೋರ್ಟ್ ನ್ಯಾಯಾಂಗ ತನಿಖೆ ನಡೆಯಲಿ : ಡಾ.ಭರತ್ ಶೆಟ್ಟಿ

ಮಂಗಳೂರು: ವಿಧಾನಸಭೆಯ ಸಭಾಧ್ಯಕ್ಷರ ಕಚೇರಿಯಲ್ಲಿ ಆಡಳಿತಾತ್ಮಕ ಸುಧಾರಣೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ಮತ್ತು ದುಂದುವೆಚ್ಚ ನಡೆದಿರುವ ಆರೋಪಗಳು ಕೇಳಿಬಂದಿವೆ. ಇದರ ಕುರಿತು ಹಾಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕೆಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಸಭಾಧ್ಯಕ್ಷ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ವಿಧಾನಸಭೆಯ ಆಡಳಿತದಲ್ಲಿ ಅನೇಕ ಗಂಭೀರ ಅವ್ಯವಹಾರಗಳು ನಡೆದಿವೆ. ಸದನದ ಹಿರಿಮೆಯನ್ನು ಕಾಪಾಡಬೇಕಾದ ಕಚೇರಿಯೇ ಇಂದು ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗಿದೆ” ಎಂದು ಹೇಳಿದರು.


---

ದುಂದುವೆಚ್ಚದ ಖರೀದಿ ಮತ್ತು ಅನುಮಾನಾಸ್ಪದ ಗುತ್ತಿಗೆ

ವಿಧಾನಸೌಧದ ವಿದ್ಯುತ್ ಅಲಂಕಾರ, ಶಾಸಕರ ಭವನದ ಹಾಸಿಗೆ-ದಿಂಬು ಖರೀದಿ, ವಿದೇಶ ಅಧ್ಯಯನ ಪ್ರವಾಸ, ಮಸಾಜ್ ಪಾರ್ಲರ್ ಅಳವಡಿಕೆ, ಪುಸ್ತಕ ಮೇಳ, ಎಐ ಕ್ಯಾಮರಾ ಅಳವಡಿಕೆ ಸೇರಿದಂತೆ ಅನೇಕ ದುಂದುವೆಚ್ಚ ನಡೆದಿದೆ ಎಂದು ಅವರು ಆರೋಪಿಸಿದರು.

ಅದೇ ರೀತಿ ಸ್ಮಾರ್ಟ್ ಡೋರ್‌ಲಾಕ್‌ಗಳು, ಸೇಫ್ ಲಾಕರ್ಸ್, ಸ್ಟೀಲ್ ವಾಟರ್ ಪ್ಯೂರಿಫೈಯರ್‌ಗಳ ಖರೀದಿಯಲ್ಲಿ ಮಾರುಕಟ್ಟೆ ದರಕ್ಕಿಂತ ಎರಡು-ಮೂರು ಪಟ್ಟು ಹೆಚ್ಚು ಬೆಲೆ ತೋರಿಸಲಾಗಿದೆ. ಈ ಗುತ್ತಿಗೆಗಳನ್ನು ಮಂಗಳೂರು ಮೂಲದ ಕೆಲವು ಕಂಪನಿಗಳಿಗೆ ಅನುಮಾನಾಸ್ಪದವಾಗಿ ನೀಡಲಾಗಿದೆ ಎಂದು ಅವರು ಹೇಳಿದರು.


---

ಹಣಕಾಸು ನಿಯಮ ಉಲ್ಲಂಘನೆ ಆರೋಪ

ಯಾವುದೇ ಖರೀದಿಗೆ ಹಣಕಾಸು ಇಲಾಖೆಯ ಅನುಮತಿ ಅಗತ್ಯವಾದರೂ, ಇಲ್ಲಿ ಕೋಟ್ಯಂತರ ರೂಪಾಯಿ ವೆಚ್ಚವನ್ನು ಅನುಮತಿ ಇಲ್ಲದೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಒತ್ತಡದಿಂದ ಹಣಕಾಸು ಇಲಾಖೆ 4ಜಿ ವಿನಾಯಿತಿ ನೀಡಿರುವುದೂ ಸಂಶಯಾಸ್ಪದವಾಗಿದೆ ಎಂದು ಅವರು ಹೇಳಿದರು.


---

ಪಾರದರ್ಶಕತೆ ಮತ್ತು RTI ವ್ಯಾಪ್ತಿ ಬೇಡಿಕೆ

ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಈ ಸಮಯದಲ್ಲಿ ಇಂತಹ ದುಂದುವೆಚ್ಚ ತೀರಾ ಅನಗತ್ಯ ಎಂದು ಭರತ್ ಶೆಟ್ಟಿ ಹೇಳಿದರು. ಸಭಾಧ್ಯಕ್ಷರ ಕಚೇರಿ ಮಾಹಿತಿ ಹಕ್ಕು ಕಾಯಿದೆ (RTI) ವ್ಯಾಪ್ತಿಗೆ ಬರಬೇಕೆಂದು ಅವರು ಒತ್ತಾಯಿಸಿದರು. ಹೈಕೋರ್ಟ್ ಹಾಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖೆ ನಡೆಸಿ ವರದಿ ನೀಡಬೇಕೆಂದು ಆಗ್ರಹಿಸಿದರು.


---

> “ಸದನದ ಹಿರಿಮೆ ಗರಿಮೆಯನ್ನು ಕಾಪಾಡಬೇಕಾದ ಕಚೇರಿಯೇ ಇಂದು ಭ್ರಷ್ಟಾಚಾರದ ಆರೋಪಗಳ ಗುರಿಯಾಗಿದೆ.”
— ಡಾ. ವೈ. ಭರತ್ ಶೆಟ್ಟಿ




---

ಪಕ್ಷಪಾತದ ನಡವಳಿಕೆಯ ಉಲ್ಲೇಖ

ಜುಲೈ 2023ರಲ್ಲಿ ಮತ್ತು ಮಾರ್ಚ್ 2025ರಲ್ಲಿ ಬಿಜೆಪಿ ಶಾಸಕರ ಅಮಾನತು ಪ್ರಕರಣಗಳನ್ನೂ ಅವರು ನೆನಪಿಸಿದರು. “ಖಾದರ್ ಅನೇಕ ಬಾರಿ ಪಕ್ಷಪಾತದ ನಡವಳಿಕೆಯನ್ನು ತೋರಿಸಿದ್ದು, ವಿರೋಧ ಪಕ್ಷದ ಶಾಸಕರಿಗೆ ಮಾತನಾಡಲು ಅವಕಾಶ ನೀಡಿಲ್ಲ” ಎಂದು ಅವರು ಹೇಳಿದರು.


---

ಸುದ್ದಿಗೋಷ್ಠಿಯಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜ್‌ಗೋಪಾಲ ರೈ, ಅರುಣ ಜಿ. ಶೇಟ್, ಪೂರ್ಣಿಮಾ ಎಂ. ಮತ್ತಿತರರು ಉಪಸ್ಥಿತರಿದ್ದರು.

1 Comments

Post a Comment

Previous Post Next Post