ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಳ ಬಳಿ ಜಾನುವಾರುಗಳನ್ನು ಅನಧಿಕೃತವಾಗಿ ಸಾಗಿಸುತ್ತಿದ್ದ ವಾಹನ ತಡೆಯಲು ಯತ್ನಿಸಿದ ಪೊಲೀಸರ ಕಾರಿನ ಮೇಲೆ ದಾಳಿ ನಡೆಸಿದ ಆರೋಪಿ ಅಬ್ದುಲ್ಲಾ (40) ಕಾಲಿಗೆ ಗುಂಡು ಹಾರಿಸಿ ತಡೆದು ಜಾನುವಾರುಗಳನ್ನು ರಕ್ಷಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ಐಚರ್ ವಾಹನದಲ್ಲಿ 10 ಜಾನುವಾರುಗಳನ್ನು ಸಾಗಿಸುತ್ತಿದ್ದ ಅಬ್ದುಲ್ಲಾ, ಪೊಲೀಸರು ಸೂಚನೆ ನೀಡಿದರೂ ವಾಹನ ನಿಲ್ಲಿಸದೆ ಸುಮಾರು 10 ಕಿಮೀ ದೂರ ಓಡಿಸಿಕೊಂಡು ಹೋಗಿದ್ದು, ವಾಹನ ತಡೆಯಲು ಮುಂದುಗಡೆ ಹೋದ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಪಿಎಸ್ಐ ಎರಡು ಎಚ್ಚರಿಕಾ ಗುಂಡು ಹಾರಿಸಿದ್ದು, ಒಂದು ಗುಂಡು ಆರೋಪಿಯ ಕಾಲಿಗೆ ತಗುಲಿದೆ.
ಘಟನೆಯ ವೇಳೆ ಇನ್ನೊಬ್ಬ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಅಬ್ದುಲ್ಲನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಕಾಸರಗೋಡು ಮೂಲದವನಾಗಿದ್ದು, ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment