Top News

ರಾಜ್ಯಾದ್ಯಂತ ಸಾವಿರಾರು BPL ಕಾರ್ಡ್‌ಗಳು ರದ್ದು ; ಸರ್ಕಾರದ ಅವೈಜ್ಞಾನಿಕ ಕ್ರಮಕ್ಕೆ ಕಂಗಾಲಾದ ಜನ ; ಮರುಪರಿಶೀಲನೆಗೆ ಒತ್ತಾಯ

ಬೆಂಗಳೂರು: ರಾಜ್ಯ ಸರ್ಕಾರ  BPL ಕಾರ್ಡ್‌ಗಳನ್ನು ರದ್ದುಪಡಿಸುವ ಕ್ರಮಕ್ಕೆ ವೇಗ ನೀಡಿದ್ದು, ಸಿಬಿಡಿಟಿ (Central Board of Direct Taxation) ನೀಡಿರುವ ಮಾಹಿತಿ ಆಧಾರದ ಮೇಲೆ ಬೆಂಗಳೂರಿನಲ್ಲೇ ಲಕ್ಷಾಂತರ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ವ್ಯಕ್ತವಾಗಿದೆ.

ಆಹಾರ ಇಲಾಖೆಗೆ ಕಳೆದ ತಿಂಗಳು ಲಭ್ಯವಾದ ತೆರಿಗೆ ವರದಿಯ ಪ್ರಕಾರ, ತೆರಿಗೆ ಕಟ್ಟುತ್ತಿರುವಾಗಲೂ BPL ಕಾರ್ಡ್ ಪಡೆದಿರುವವರ ಕಾರ್ಡ್‌ಗಳನ್ನು APL ಕಾರ್ಡ್‌ಗಳಿಗೆ ಪರಿವರ್ತಿಸಲಾಗುತ್ತಿದೆ.

ರಾಜಾಜಿನಗರ ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿ 13,329 BPL ಕಾರ್ಡ್‌ಗಳು ರದ್ದು ಆಗಿದ್ದು, ಅವುಗಳನ್ನು APL ವರ್ಗಕ್ಕೆ ಸೇರಿಸಲಾಗಿದೆ.

ಈ ಬೆಳವಣಿಗೆಯಿಂದ ರಾಜಾಜಿನಗರದ ಆಹಾರ ಇಲಾಖೆಯ ಕಚೇರಿ ಮುಂದೆ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದು, “ಕಳೆದ ತಿಂಗಳು ರೇಷನ್ ಸಿಕ್ಕಿತ್ತು, ಆದರೆ ಈ ತಿಂಗಳು ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಟ್ಯಾಕ್ಸ್ ಕಟ್ಟುವುದಿಲ್ಲ. ಮಗಳು ಕೆಲಸ ಮಾಡುತ್ತಿದ್ದಳು, ಈಗ ಮದುವೆಯಾಗಿದೆ. ಹೀಗಿರುವಾಗ ನಮ್ಮ ಕಾರ್ಡ್ ಹೇಗೆ ರದ್ದಾಗುವುದು?” ಎಂದು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

BPL ಕಾರ್ಡ್ ಪಡೆಯಲು ಯಾವ್ಯಾವ ನಿಬಂಧನೆಗಳು ?
2017ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ —
• ಸರ್ಕಾರಿ ನೌಕರರಿರಬಾರದು
•ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿ ಇರಬಾರದು
•ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚು ಆಸ್ತಿ ಇರಬಾರದು
•ನಾಲ್ಕು ಚಕ್ರದ ವಾಹನ ಇರಬಾರದು
•ಕುಟುಂಬದ ವಾರ್ಷಿಕ ಆದಾಯ ರೂ.1.20 ಲಕ್ಷ ಮೀರಬಾರದು
ಈ ನಿಬಂಧನೆಗಳನ್ನು ಮೀರಿ ಪಡೆದಿರುವ ಕಾರ್ಡ್‌ಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

ರಾಜ್ಯಾದ್ಯಂತ ಆತಂಕ ;ಮರುಪರಿಶೀಲನೆ ಬೇಡಿಕೆ :
ಪಡಿತರ ಅಂಗಡಿಗಳಲ್ಲಿ ಈಗಾಗಲೇ ನೋಟಿಸ್ ಹಾಕಿ, ಅರ್ಹತೆ ದೃಢೀಕರಣಕ್ಕೆ ದಾಖಲೆಗಳನ್ನು ಸಲ್ಲಿಸುವಂತೆ ಆಹಾರ ಇಲಾಖೆ ಸೂಚಿಸಿದೆ. ಇದರಿಂದ ಹಲವಾರು ಬಡ ಕುಟುಂಬಗಳು ಸಂಕಟಕ್ಕೆ ಒಳಗಾಗಿದ್ದು, “ಸರ್ಕಾರ ಮರುಪರಿಶೀಲನೆ ಮಾಡಬೇಕು” ಎಂದು ಆಗ್ರಹಿಸುತ್ತಿವೆ.
ಇದಕ್ಕೂ ಮೊದಲು ಹಾವೇರಿ ಜಿಲ್ಲೆಯಲ್ಲಿ 14,771 ಅನರ್ಹ ಪಡಿತರ ಕಾರ್ಡ್‌ಗಳನ್ನು ಗುರುತಿಸಿ ರದ್ದುಪಡಿಸಲು ಆದೇಶಿಸಲಾಗಿತ್ತು. ಎರಡು ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್‌ಗಳಲ್ಲಿನ ಈ ಕ್ರಮ ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿತ್ತು.

Post a Comment

Previous Post Next Post