ಮೂಡಬಿದರೆ : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲೂಕಿನ ಎಡಪದವು ಪ್ರದೇಶದಲ್ಲಿ ಸೋಮವಾರ ಸಂಜೆ ಮತ್ತೊಮ್ಮೆ ತಲವಾರಿನ ಸದ್ದು ಕೇಳಿಬಂದ ಘಟನೆ ನಡೆದಿದೆ. ಸ್ಥಳೀಯವಾಗಿ ಕೇಟರಿಂಗ್ ಕೆಲಸ ಮಾಡಿಕೊಂಡಿದ್ದ ಅಖಿಲೇಶ್ ಎಂಬ ಯುವಕನ ಮೇಲೆ ನಾಲ್ವರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅಖಿಲೇಶ್ ಅವರು ಎಡಪದವು ಕಡೆಯಿಂದ ಮಂಗಳೂರಿನ ಕಡೆಗೆ ಆಕ್ಟಿವಾದಲ್ಲಿ ಸಾಗುತ್ತಿದ್ದ ವೇಳೆ, ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ನಾಲ್ವರು ಅಪರಿಚಿತರು ತಲವಾರು ಹಿಡಿದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಿಂದ ಅವರ ಬಲಗೈಗೆ ಗಂಭೀರ ಗಾಯವಾಗಿದ್ದು, ಸ್ಥಳಕ್ಕೆ ಓಡಿಬಂದ ಸಾರ್ವಜನಿಕರು ಅವರನ್ನು ತಕ್ಷಣ ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎಡಪದವು ಪೂಪಾಡಿ ಕಲ್ಲು ನಿವಾಸಿ ಅಖಿಲೇಶ್ ದಾಳಿಗೆ ಒಳಗಾದ ಯುವಕ ಎಂದು ಮೂಲಗಳು ತಿಳಿಸಿವೆ. ಭಾಗ್ಯವಶಾತ್ ಪ್ರಾಣಾಪಾಯವಾಗಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ದಾಳಿ ನಡೆಸಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೂಡಬಿದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ.
Post a Comment