ಬಂಟ್ವಾಳ: ಬಿ.ಸಿ.ರೋಡು ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದ ಘಟನೆಯಲ್ಲಿ, ಸೋಮಯಾಜಿ ಟೆಕ್ಸ್ಟೈಲ್ಸ್‌ನ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಅವರ ಮೇಲೆ ಅವರ ಪತ್ನಿ ಜ್ಯೋತಿ ಕೆ.ಟಿ. ಅವರು ಬುರ್ಕಾ ಧರಿಸಿ ಗ್ರಾಹಕರ ಹೆಸರಿನಲ್ಲಿ ಬಂದು ಕತ್ತಿಯಿಂದ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದೆ.
ಘಟನೆಯ ವಿವರಗಳ ಪ್ರಕಾರ, ಸೇಲ್ಸ್‌ಮ್ಯಾನ್ ಆಗಿರುವ ಫಿರ್ಯಾದಿದಾರರಾದ ನಮಿತಾ (33) ಅವರು ಹಾಗೂ ಅಂಗಡಿ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ರಾತ್ರಿ ಸುಮಾರು 7 ಗಂಟೆಗೆ ಅಂಗಡಿಯಲ್ಲಿ ಇದ್ದ ವೇಳೆ, ಬುರ್ಕಾ ಧರಿಸಿದ ಮಹಿಳೆ ಪ್ರವೇಶಿಸಿ ಅಚಾನಕ್ ದಾಳಿಯನ್ನು ನಡೆಸಿದರು. ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಕೃಷ್ಣ ಕುಮಾರ್ ಸೋಮಯಾಜಿಯನ್ನು ಫಿರ್ಯಾದಿದಾರರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಲ್ಲೆ ನಡೆದ ಮಹಿಳೆ ಕೃಷ್ಣ ಕುಮಾರ್ ಸೋಮಯಾಜಿಯವರ ಪತ್ನಿ ಎಂದು ತನಿಖೆಯಿಂದ ತಿಳಿದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ದ್ವೇಷದಿಂದಲೇ ಹಲ್ಲೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಕೂಡಾ ಆರೋಪಿತೆ ಅಂಗಡಿಗೆ ಬಂದು ಜೀವ ಬೆದರಿಕೆ ಹಾಕಿದ್ದ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 131/2025 ರಂತೆ ಬಿಎನ್‌ಎಸ್-2023ರ ಕಲಂ 118(1), 118(2), 351(3), 109 ಹಾಗೂ ಇಂಡಿಯನ್ ಆರ್ಮ್ಸ್ ಆಕ್ಟ್-1959ರ ಸೆಕ್ಷನ್ 2(1)(C), 27 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.
Post a Comment