ಹೆಬ್ರಿ: ಹೆಬ್ರಿ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಕೂಡ್ಲು ಫಾಲ್ಸ್‌ನಲ್ಲಿ ನಡೆದ ದುರ್ಘಟನೆಯಲ್ಲಿ ಯುವಕನೊಬ್ಬ ಬಂಡೆಯಿಂದ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಉಡುಪಿಯ ಕೊಂಜಾಡಿ ಮೂಲದ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದ ಸವಿತಾ ಪಿ. ಶೆಟ್ಟಿ ಅವರ ಪುತ್ರ ಮನ್ವಿತ್ (25) ಎಂದು ಗುರುತಿಸಲಾಗಿದೆ.
ಮನ್ವಿತ್ ಅವರು ಡಿಸೆಂಬರ್ 12ರಂದು ಸ್ವಂತ ಮನೆ ಕೊಂಜಾಡಿಗೆ ಆಗಮಿಸಿದ್ದರು. ಡಿಸೆಂಬರ್ 14ರಂದು ಸ್ನೇಹಿತರೊಂದಿಗೆ ಹೆಬ್ರಿ ಸಮೀಪದ ಕೂಡ್ಲು ಫಾಲ್ಸ್‌ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ನೇಹಿತರು ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ, ಮನ್ವಿತ್ ಎತ್ತರದ ಬಂಡೆಯ ಮೇಲೆ ಕುಳಿತಿದ್ದರು. ಆ ಸಮಯದಲ್ಲಿ ಆಕಸ್ಮಿಕವಾಗಿ ತಲೆ ತಿರುಗಿ ಸಮತೋಲನ ಕಳೆದುಕೊಂಡು ಕೆಳಗಿನ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಮನ್ವಿತ್ ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 17ರಂದು ಬೆಳಗ್ಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮನ್ವಿತ್ ಅವರಿಗೆ ಮೂರ್ಚೆ (ಎಪಿಲೆಪ್ಸಿ) ಸಮಸ್ಯೆ ಇದ್ದು, ಈ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Post a Comment