ಮಂಗಳೂರು: ತಲ್ವಾರ್ ಹಿಡಿದು ಹಾಡಿಗೆ ನೃತ್ಯ ಮಾಡಿರುವ ರೀಲ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಆರೋಪದ ಮೇಲೆ ಕಾವೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದಿನಾಂಕ 13-12-2025 ರಂದು “Suresh Psy” ಎಂಬ ಹೆಸರಿನ ಫೇಸ್‌ಬುಕ್ ಖಾತೆ ಹೊಂದಿರುವ ಸುರೇಶ್ ಎಂಬ ವ್ಯಕ್ತಿ, MOB ಅಸಾಮಿಯಾದ ಅಮೀರ್ ಸುಹೇಲ್ ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋವನ್ನು ತನ್ನ ಫೇಸ್‌ಬುಕ್ ಸ್ಟೋರಿಗೆ ‘VIBES’ ಹಾಗೂ ಬಿಳಿ ಬಣ್ಣದ ಹಾರ್ಟ್ ಗುರುತುಗಳೊಂದಿಗೆ ಹಂಚಿಕೊಂಡಿದ್ದಾನೆ. ಈ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಲ್ಲಿ ಆತಂಕ ಹಾಗೂ ಭಯ ಸೃಷ್ಟಿಸಿದ ಆರೋಪದ ಮೇರೆಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 188/2025 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 352(2), ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 25(1ಬಿ) ಹಾಗೂ ಐ.ಟಿ. ಕಾಯ್ದೆಯ ಕಲಂ 66 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ದಿನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೀರ್ ಸುಹೇಲ್ ಹಾಗೂ ಸುರೇಶ್ ಎಂಬ ಇಬ್ಬರು ಆರೋಪಿಗಳನ್ನು, ರೀಲ್ಸ್ ಮಾಡಲು ಬಳಸಿದ ತಲ್ವಾರ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್‌ಗಳೊಂದಿಗೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ವಿವರ:
1. ಅಮೀರ್ ಸುಹೇಲ್ (28), ತಂದೆ: ದಿ. ಉಮ್ಮರ್, ನಿವಾಸ: ಅಮೀನ್ ಉಲ್ಲಾ, 1ನೇ ಮಹಡಿ, ಜೆ.ಡಮ್ ರೋಡ್, ಬಂದರು, ಮಂಗಳೂರು.
2. ಸುರೇಶ್ (29), ತಂದೆ: ದಿ. ರಮೇಶ್, ನಿವಾಸ: 2-19/30, ಧನುಷ್ ಗೌಂಡ್ ಬಳಿ, ಉರುಂದಾಡಿಗುಡ್ಡೆ, ಕಾವೂರು, ಮಂಗಳೂರು.
ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣೆಯ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ ಹಾಗೂ ಠಾಣಾ ಸಿಬ್ಬಂದಿಗಳಾದ ಸಂಭಾಜಿ ಕದಂ, ಕೆಂಚನ ಗೌಡ, ಶರಣಪ್ಪ, ರಾಘವೇಂದ್ರ ಮತ್ತು ರಿಯಾಜ್ ಅವರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
Post a Comment