ಉಡುಪಿ : ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪೂರ್ಣಕುಂಭ ಸ್ವಾಗತ ನಡೆಯಿತು.
ವೇದ ಮಂತ್ರಗಳ ಪಠಣದೊಂದಿಗೆ, ಮಂಗಳವಾದ್ಯ ಸಹಿತ ಪ್ರಧಾನಿಯವರನ್ನು ಬರಮಾಡಿಕೊಳ್ಳಲಾಯಿತು. ರಥಬೀದಿಯಿಂದ ಶ್ರೀಕೃಷ್ಣ ಮಠದವರೆಗೂ ವೇದ ಮಂತ್ರಗಳ ನಿರಂತರ ಪಠಣ ನಡೆಯಿತು. ಪಂಚ ವಾದ್ಯಗಳ ಗಾನ ಸರ್ವವ್ಯಾಪಿಯಾಗಿತ್ತು. ಪ್ರತ್ಯೇಕ ಗುಂಪುಗಳಿಂದ ಮಂಗಳ ವಾದ್ಯ, ವೇದ ಮಂತ್ರಗಳ ಘೋಷಣೆ ನಡೆಯಿತು.
ರಥಬೀದಿಯ ಆವರಣದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಕನಕನ ಗುಡಿಯನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಕನಕನ ಕಿಂಡಿಗೆ ಕನಕ ಕವಚ ಹೊದಿಸಲಾಗಿತ್ತು. ಶ್ರೀಕೃಷ್ಣ ಮಠದ ಮುಖ್ಯದ್ವಾರ, ಗೀತ ಮಂದಿರ ಸೇರಿದಂತೆ ಎಲ್ಲಡೆ ದೀಪಾಲಂಕಾರ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕನಕ ಮೂರ್ತಿಗೆ ಮಾಲಾರ್ಪಣೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಕನಕ ಕಿಂಡಿಗೆ ಜೋಡಿಸಿರುವ ಕನಕ ಕವಚವನ್ನು ಪ್ರಧಾನಿ ಉದ್ಘಾಟಿಸಿದರು. ನಂತರ ಕನಕನ ಕಿಂಡಿಯ ಮೂಲಕ ಜಗದ್ದೋದರಕನ ದರ್ಶನ ಮಾಡಿದರು. ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ, ಶ್ರೀಕೃಷ್ಣನ ದರ್ಶನ
ಸ್ವರ್ಣತೀರ್ಥ ಮಂಟಪ ಉದ್ಘಾಟಿಸಿದರು. ನಂತರ ಪರ್ಯಾಯ ಶ್ರೀಪಾದರ ಸಮ್ಮುಖದಲ್ಲಿ ಶ್ರೀಕೃಷ್ಣನ ಎದುರು ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕಾರ ಮಾಡಿದರು. ನಂತರ ಚಂದ್ರಶಾಲೆಗೆ ತೆರಳಿ ಅಷ್ಟ ಮಠದ ಯತಿಗಳ ಜತೆ ಚರ್ಚೆ ನಡೆಸಿದರು. ಬಳಿಕ ಮುಖ್ಯಪ್ರಾಣರ ದರ್ಶನ ನಡೆಯಿತು. ಗೀತಾ ಮಂದಿರದಲ್ಲಿ ಪರ್ಯಾಯ ಶ್ರೀಗಳ ಜತೆ ಮಾತುಕತೆ ನಡೆಸಿದರು. ಬಳಿಕ ಅನಂತಶಯನ ಮೂರ್ತಿಯ ಉದ್ಘಾಟನೆ ನಡೆಸಿದರು.
Post a Comment