ಮಂಗಳೂರು: ದೋಣಿಂಜೆಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಯತಿವರ್ಯರ ಮತ್ತು ತಂತ್ರಿವರ್ಯರ ಅನುಗ್ರಹ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಅರಮನೆ, ಬೀಡುಗಳ ಅರಸರು ಹಾಗೂ ಗುತ್ತು ಮನೆತನದ ಗಡಿಕಾರರು ಹಾಗೂ ಯಜಮಾನರುಗಳ ಸಮಕ್ಷಮದಲ್ಲಿ ವಿಶ್ವ ಹಿಂದೂ ಪರಿಷತ್, ಹಿಂದೂ ಯುವಸೇನೆ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸಹಕಾರದೊಂದಿಗೆ ಡಿ.21ರಂದು ಉರ್ವ ಮಾರಿಗುಡಿಯಲ್ಲಿ ನಡೆಯಲಿರುವ ಧರ್ಮಾವಲೋಕನ ಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ಸಂಜೆ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಜರುಗಿತು.
ಈ ಸಂದರ್ಭ ಮಾತಾಡಿದ ಪ್ರಮೋದ್ ಕುಮಾರ್ ರೈ ಅವರು, “ಹಿಂದೂ ಧರ್ಮ ಸಂರಕ್ಷಣೆ ಮತ್ತು ಇಂದಿನ ಯುವ ಪೀಳಿಗೆಯಲ್ಲಿ ಧರ್ಮ ಜಾಗೃತಿಯನ್ನು ಮೂಡಿಸುವ ಸಲುವಾಗಿ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಧರ್ಮದ ಕುರಿತು ಅವಲೋಕನ ಮತ್ತು ಒಳಿತು ಕೆಡುಕುಗಳ ಕುರಿತು ಚರ್ಚೆ ನಡೆಯಬೇಕಿದೆ” ಎಂದರು.
ಈ ಸಂದರ್ಭದಲ್ಲಿ ಹಿಂದೂ ಯುವಸೇನೆ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ವಿಶ್ವಹಿಂದೂ ಪರಿಷತ್ ಪ್ರಮುಖರಾದ ಪ್ರವೀಣ್ ಕುತ್ತಾರ್, ಜಗದೀಶ್ ಅಧಿಕಾರಿ, ಪಮ್ಮಿ ಕೊಡಿಯಾಲ್ ಬೈಲ್, ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ, ಧಾರ್ಮಿಕ ಚಿಂತಕ ಕಿರಣ್ ಉಪಾಧ್ಯಾಯ, ವಿಜಯ್ ಶೆಟ್ಟಿ, ವಸಂತ ಶೇಣವ ಮತ್ತಿತರರು ಉಪಸ್ಥಿತರಿದ್ದರು.
Post a Comment