ಮಂಗಳೂರು : ರೋಟರಿ ಅಂತಾರಾಷ್ಟ್ರೀಯ ಜಿಲ್ಲಾ 3181ರ ಆಡಳಿತ ಸಮಿತಿ ಮತ್ತು ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ “ರೋಟರಿ ನಿಧಿ ಶೋಧ ಸ್ಪರ್ಧಾಕೂಟ” ನಗರದ ಪಡೀಲ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ವರ್ಷಾ ಹೌಸ್ ಮಳಿಗೆಯ ಆವರಣದಲ್ಲಿ ರವಿವಾರ ಜರುಗಿತು.
ಈ ಸ್ಪರ್ಧಾಕೂಟಕ್ಕೆ ರೋಟರಿ ಅಂತಾರಾಷ್ಟ್ರೀಯ ಜಿಲ್ಲಾ 3181ರ ಚುನಾಯಿತ ಗವರ್ನರ್‌ರಾದ ರೊ.ಸತೀಶ್ ಬೋಳಾರ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ, ಸ್ಪರ್ಧಾ ತಂಡಗಳಿಗೆ ಶುಭ ಹಾರೈಸಿದರು.
ಈ ಸ್ಪರ್ಧಾಕೂಟದಲ್ಲಿ ಸುಮಾರು 31 ಮೋಟಾರು ಕಾರುಗಳು ಮತ್ತು 120 ಸ್ಪರ್ಧಾಳುಗಳು 2 ಗಂಟೆ ಅವಧಿಯಲ್ಲಿ 17 ಕಿ.ಮೀ. ಪ್ರಯಾಣ ಬೆಳೆಸಿ ನಿಧಿ ಶೋಧದಲ್ಲಿ ಕಾರ್ಯನಿರತರಾದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಷಾ ಆಟೋ ಹೌಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಜಿಶ್ ದಾಮೋದರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ಪರ್ಧಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು.
ಸ್ಪರ್ಧಾ ವಿಜೇತರು:
ಪುರುಷರ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ರೋಟರಿ ಮೆಟ್ರೋ ಸಂಸ್ಥೆಯ ಪ್ರತಿನಿಧಿಗಳಾದ ಬಂಟ್ವಾಳ ನರೇಂದ್ರ ಪ್ರಭು, ಮದನ್ ಶೆಣೈ, ಬಸ್ತಿ ವಿಖ್ಯಾತ್ ಶೆಣೈ ತಂಡ ಹಾಗೂ ದ್ವಿತೀಯ ಸ್ಥಾನವನ್ನು ರೋಟರಿ ಹಿಲ್ ಸೈಡ್ ಸಂಸ್ಥೆಯ ಸತೀಶ್ ಯಡಪಡಿತ್ತಾಯ, ವಿನೋದ್ ರೋಡ್ರಿಗಸ್, ಆಲ್ಡ್ರಿನ್ ವಾಜ್, ಅನೀಶ್ ಕುಮಾರ್ ಪಡೆದರು. ಮಹಿಳಾ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಯನ್ನು ರೋಟರಿ ಮೈನ್ ಮಂಗಳೂರು ಸಂಸ್ಥೆಯನ್ನು ಪ್ರತಿನಿಧಿಸಿದ ಪಾರ್ವತಿ ಕುನಾಲ್, ಲಕ್ಷ್ಮೀ ಶೆಟ್ಟಿ, ಮರಿಯಾ ವಾಜ್, ವಾಣಿ ರಾಜೇಂದ್ರ ಕಲ್ಬಾವಿ ಪಡೆದರೆ, ದ್ವಿತೀಯ ಸ್ಥಾನವನ್ನು ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯನ್ನು ಪ್ರತಿನಿಧಿಸಿದ ಪ್ರಮೀಳಾ ಹೆಗ್ಡೆ, ನಮೃತಾ ಶೆಟ್ಟಿ ಕೋಟ್ಯಾನ್, ಹೇಮಾ ರೇವಣ್‌ಕರ್, ಸೌಮ್ಯಾ ಅಮಿತ್‌ರಾಜ್ ಪಡೆದರು.
ದಿಜಿಶ್ ದಾಮೋದರನ್ ಅವರು ಸ್ಪರ್ಧಾ ವಿಜೇತರ ಅಪ್ರತಿಮ ಸಾಧನೆಯನ್ನು ಪ್ರಶಂಸಿಸಿ ಪ್ರಶಸ್ತಿ, ಪ್ರಮಾಣ ಪತ್ರ, ನಗದು ಬಹುಮಾನ 25 ಸಾವಿರ ರು. ವಿತರಿಸಿ ಅಭಿನಂದಿಸಿದರು.
ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷರಾದ ರೊ.ಸಜ್ನಾ ಭಾಸ್ಕರ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿ, ಸ್ಪರ್ಧಾಕೂಟದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಸ್ಪರ್ಧಾಕೂಟದ ಸಂಘಟನಾ ಅಧ್ಯಕ್ಷರಾದ ರೊ. ಸುಮಿತ್ ರಾವ್ ಅವರು ಕಾರ್ಯಕ್ರಮ ನಿರೂಪಿಸಿ, ಸ್ಪರ್ಧಾ ವಿಜೇತರನ್ನು ಅಭಿನಂದಿಸಿ, ಈ ಸ್ಪರ್ಧಾಕೂಟದ ಆದಾಯವನ್ನು ನಮ್ಮ ಸಂಸ್ಥೆಯ ಸಮಾಜ ಸೇವಾ ಚಟುವಟಿಕೆಯ ಅಂಗವಾಗಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಗರ್ಭಕಂಠ ಕ್ಯಾನ್ಸರ್ ಚಿಕಿತ್ಸೆಗಾಗಿ ವಿನಿಯೋಗಿಸಲಾಗುವುದು ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಡಾ.ರಂಜನ್ ರಾವ್ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರೊ. ಪದ್ಮನಾಭ ನಾಯಕ್ ವಂದಿಸಿದರು. ಈ ಸ್ಪರ್ಧಾಕೂಟವನ್ನು ವರ್ಷಾ ಹೌಸ್ ಮತ್ತು ಇಸುಝು ಸಂಸ್ಥೆ ಪ್ರಾಯೋಜಿಸಿತ್ತು.
Post a Comment