Top News

70 ಸಾಧಕರು ಮತ್ತು 24 ಸಂಸ್ಥೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ; ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ, ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ

ಮಂಗಳೂರು : 2025ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಮೆರೆದ ಸಾಧನೆಗಾಗಿ 70 ಮಂದಿ ಪ್ರತಿಭಾವಂತರನ್ನು ಹಾಗೂ 24 ಸಂಘ–ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಈ ಗೌರವ ನೀಡಲಾಗುತ್ತದೆ. ಈ ಬಾರಿ ಆಯ್ಕೆಯಾದವರ ಪಟ್ಟಿ ವೈವಿಧ್ಯತೆಯಿಂದ ಕೂಡಿದ್ದು, ಕಲೆಯಿಂದ ಕ್ರೀಡೆವರೆಗೆ ಅನೇಕ ಕ್ಷೇತ್ರಗಳ ಸಾಧಕರಿಗೆ ಮಾನ್ಯತೆ ದೊರೆತಿದೆ.
ನೃತ್ಯ ಕ್ಷೇತ್ರದಲ್ಲಿ ರೆಮೋನಾ ಇವೆಟ್ ಪಿರೇರಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ, ಪತ್ರಿಕಾ ಛಾಯಾಗ್ರಾಹಕರು ಸತೀಶ್ ಇರಾ, ಎ.ಕೆ. ಕುಕ್ಕಿಲ ಹಾಗೂ ರಾಜೇಶ್ ದಡ್ಡಂಗಡಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಆಯ್ಕೆಯಾದರೆ, ಉದ್ಯಮ ಕ್ಷೇತ್ರದಲ್ಲಿ ಎಡಕ್ಕಾನ ಮಹಾಬಲೇಶ್ವರ ಭಟ್ ಅವರಿಗೆ ಗೌರವ ದೊರೆತಿದೆ.

ಸಮಾಜ ಸೇವೆ ವಿಭಾಗದಲ್ಲಿ ಅನಿವಾಸಿ ಭಾರತೀಯ ಪ್ರವೀಣ್ ಶೆಟ್ಟಿ ಪಿಲಾರು, ಮೊಹಮ್ಮದ್ ಮುಕ್ಕಚ್ಚೇರಿ ಹಾಗೂ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅವರ ಸೇವೆಯನ್ನು ಗುರುತಿಸಲಾಗಿದೆ. ರಂಗಭೂಮಿ ಕ್ಷೇತ್ರದಲ್ಲಿ ಸುಂದರ ರೈ ಮಂದಾರ, ದೈವಾರಾಧನೆ ವಿಭಾಗದಲ್ಲಿ ಗಣೇಶ್ ಎಸ್., ಗೋಪಾಲ ಕೋಟ್ಯಾನ್ ಹಾಗೂ ಸುರೇಂದ್ರ ಪರವ ಅವರು ರಾಜ್ಯೋತ್ಸವ ಪುರಸ್ಕೃತರಾಗಿದ್ದಾರೆ.

ಸಂಗೀತ ವಿಭಾಗದಲ್ಲಿ ಸ್ಯಾಕ್ಸೋಫೋನ್ ವಾದಕ ಬಾಬು ಸಪಲ್ಯ ಹಾಗೂ ನಾಟಿವೈದ್ಯ ವಿಭಾಗದಲ್ಲಿ ಸೋಮನಾಥ ಪಂಡಿತ್ ಅವರನ್ನು ಆಯ್ಕೆ ಮಾಡಲಾಗಿದೆ. ಕಂಬಳ ಕ್ಷೇತ್ರದಲ್ಲಿ ಸತೀಶ್ ದೇವಾಡಿಗ ಅಳದಂಗಡಿ, ಕೃಷಿ ಆಧಾರಿತ ಉದ್ಯಮದಲ್ಲಿ ಅವಿನಾಶ್ ರಾವ್, ಧಾರ್ಮಿಕ ಸೇವೆಯಲ್ಲಿ ಕುಕ್ಕಾಡಿ ಪ್ರೀತಂ ತಂತ್ರಿ, ಕ್ರೀಡಾ ಕ್ಷೇತ್ರದಲ್ಲಿ ಅಶೋಕ್ ಪೂವಯ್ಯ, ರಾಮಣ್ಣ ಗೌಡ ಪಡೀಲ್, ಬಾಲಕೃಷ್ಣ ರೈ, ಜೋಯ್ದಿನ್ ಲೋಬೋ ಮುಂತಾದ ಸಾಧಕರು ಸ್ಥಾನ ಪಡೆದಿದ್ದಾರೆ.

ಜಿಲ್ಲಾ ಮಟ್ಟದ ಪ್ರಶಸ್ತಿಗೆ 24 ಸಂಘ–ಸಂಸ್ಥೆಗಳನ್ನೂ ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಉಳ್ಳಾಲ ಮತ್ತು ಮಂಗಳೂರು ನಗರ ಭಾಗದ ಸಂಸ್ಥೆಗಳ ಸಂಖ್ಯೆ ಹೆಚ್ಚಿನದು.
ರಾಜ್ಯೋತ್ಸವ ದಿನದಂದು ಈ ಸಾಧಕರಿಗೆ ಜಿಲ್ಲಾ ಆಡಳಿತ ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನಿಸಲಿರುವುದಾಗಿ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Post a Comment

Previous Post Next Post