Top News

ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಸಲಾಂ ಅಡ್ಡೂರು ಬಂಧನ

ಮಂಗಳೂರು: 2006ರ ಡಿಸೆಂಬರ್ 1ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ನಡೆದ ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಬೀರ್‌ಗೆ ಆಶ್ರಯ ಒದಗಿಸಿದ ಆರೋಪದ ಮೇಲೆ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಬ್ದುಲ್ ಸಲಾಂ ಅಡ್ಡೂರು (47)ನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಕಬೀರ್ ಮತ್ತು ಆತನ ಸಹಚರರು ಕೊಲೆ ಎಸಗಿ ಪರಾರಿಯಾದ ನಂತರ, ಕಬೀರ್‌ಗೆ ಸಹೋದರರಾದ ಲತೀಫ್ @ ಅಡ್ಡೂರು ಲತೀಫ್ ಮತ್ತು ಅಬ್ದುಲ್ ಸಲಾಂ ಅಡ್ಡೂರು ಅಡ್ಡೂರು ಟಿಬೇಟ್ ಕಾಲೋನಿಯ ಮನೆಯಲ್ಲಿ ಎರಡು ದಿನ ಆಶ್ರಯ ನೀಡಿ, ನಂತರ ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಕರಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಕೃತ್ಯದ ಮೂರು ತಿಂಗಳ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಅಬ್ದುಲ್ ಸಲಾಂ ಹಲವು ವರ್ಷಗಳ ಕಾಲ ವಿದೇಶದಲ್ಲಿ ವಾಸವಿದ್ದು, ಇತ್ತೀಚೆಗೆ ವಾಪಸ್ಸು ಬಂದಿದ್ದಾನೆ. ಅಡ್ಡೂರಿನಲ್ಲಿದ್ದ ತನ್ನ ಮನೆಯನ್ನು ನೆಲಸಮಗೊಳಿಸಿದ ನಂತರ ಬಜಪೆ ಕಿನ್ನಿಪದವಿನಲ್ಲಿ ಬಾಡಿಗೆಗೆ ವಾಸವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಬಂಧನಕ್ಕಾಗಿ ವಿಶೇಷ ಮಾಹಿತಿ ಸಂಗ್ರಹಿಸಿದ ಪೊಲೀಸರಿಗೆ, ನವೆಂಬರ್ 18ರಂದು ರಾತ್ರಿ 8 ಗಂಟೆಗೆ ಕಿನ್ನಿಪದವಿನಲ್ಲಿ ಇವನಿರುವ ಸುಳಿವು ದೊರಕಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದರು. ಈ ಪ್ರಕರಣದಲ್ಲಿ ಈಗಾಗಲೇ 16 ಮಂದಿ ಬಂಧನಕ್ಕೊಳಗಾಗಿದ್ದು, 11 ಮಂದಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ಆರೋಪಿಯ ಸಹೋದರ ಲತೀಫ್ ಕೂಡ ವಿದೇಶದಲ್ಲಿ ಅಡಗಿಕೊಂಡಿರುವುದು ತಿಳಿದುಬಂದಿದೆ.

ಅಬ್ದುಲ್ ಸಲಾಂ ವಿರುದ್ಧ ಬಜಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣದ ಜೊತೆಗೆ ರೌಡಿ ಹಾಳೆ ತೆರೆಯಲಾಗಿದ್ದು, ಮಾನ್ಯ ನ್ಯಾಯಾಲಯದಿಂದ ಹಲವು ಬಾರಿ ಜಾರಿ ಮಾಡಲಾಗಿದ್ದ ವಾರಂಟ್‌ಗಳಿಗೆ ಹಾಜರಾಗದೇ ಇದ್ದುದರಿಂದ, ಈಗ ಕಲಂ 209 ಬಿಎನ್‌ಎಸ್ ರಂತೆ ಹೊಸ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ಆರೋಪಿಯನ್ನು ಪತ್ತೆಹಚ್ಚುವ ಕಾರ್ಯವನ್ನು ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪವಿಭಾಗ) ಶ್ರೀ ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ, ಪಿಎಸ್‌ಐ ರಘುನಾಯಕ್ ಹಾಗೂ ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ರಾಜೇಂದ್ರ ಪ್ರಸಾದ್, ವಿನೋದ್ ನಾಯ್ಕ್ ಮತ್ತು ಸುನೀಲ್ ಕುಸನಾಳ ಅವರು ಕೈಗೊಂಡಿದ್ದಾರೆ.

Post a Comment

Previous Post Next Post