Top News

ತತ್ವಮಸಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ತತ್ವಮಸಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಬೆನಿಫಿಟ್ ಸ್ಕೀಂ ಮೂಲಕ 3 ಕೋಟಿ ರೂ. ವಂಚನೆ ; ಮೂವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಸುಳ್ಯ: ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಕಾರ್ಯನಿರ್ವಹಿಸುತ್ತಿದ್ದ ‘ಶ್ರಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್ (ರಿ)’ ಹಾಗೂ ‘ಶ್ರೀ ತತ್ವಮಸಿ ಎಂಟರ್‌ಪ್ರೈಸಸ್ (ರಿ)’ ಸಂಸ್ಥೆಗಳ ಹೆಸರಿನಲ್ಲಿ ಬೆನಿಫಿಟ್ ಸ್ಕೀಂ ಪ್ರಾರಂಭಿಸಿ ಸಾರ್ವಜನಿಕರಿಂದ ಏಜೆಂಟರ ಮೂಲಕ ಕಂತು ರೂಪದಲ್ಲಿ ಹಣ ಸಂಗ್ರಹಿಸಿ ವಂಚನೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

4115 ಸದಸ್ಯರಿಂದ ಒಟ್ಟು ರೂ. 3,08,62,500/- ಹಣವನ್ನು ಸಂಗ್ರಹಿಸಿ, ವಾಗ್ದಾನ ಮಾಡಿದಂತೆ ಹಣವನ್ನಾಗಲಿ ವಸ್ತುವನ್ನಾಗಲಿ ನೀಡದೇ ವಂಚನೆ ಮಾಡಲಾಗಿದೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 248/2014ರ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಆಗಿನ ಠಾಣಾಧಿಕಾರಿ ಬ್ರಿಜೇಶ್ ಮಥ್ಯೂರವರು ನಡೆಸಿದ್ದು, ನಂತರ ಚಂದ್ರಶೇಖರ್ ಎಚ್‌.ವಿ. ಅವರು ತನಿಖೆಯನ್ನು ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಿ. ಮೋಹನ್ ಬಾಬು ಅವರ ನ್ಯಾಯಾಲಯದಲ್ಲಿ ನಡೆದಿದ್ದು, 30-10-2025ರಂದು ನೀಡಿದ ತೀರ್ಪಿನಲ್ಲಿ ಆರೋಪಿ ಸಂಖ್ಯೆ 2, 4 ಮತ್ತು 5ರ ಅಪರಾಧ ಸಾಬೀತಾಗಿ ಅವರನ್ನು ದೋಷಿಗಳೆಂದು ಘೋಷಿಸಲಾಗಿದೆ. ಆರೋಪಿ 3, 6, 7 ಮತ್ತು 8ರ ವಿರುದ್ಧ ಅಪರಾಧ ಸಾಬೀತಾಗದೆ ಅವರನ್ನು ಬಿಡುಗಡೆ ಮಾಡಲಾಗಿದೆ. 1ನೇ ಆರೋಪಿ ಮರಣಹೊಂದಿರುವುದರಿಂದ ಅವರ ಮೇಲಿನ ಪ್ರಕರಣ ಸ್ಥಗಿತಗೊಂಡಿದೆ.

ಶಿಕ್ಷಾ ಪ್ರಮಾಣವನ್ನು ನಿಗದಿಪಡಿಸಲು 03-11-2025ರಂದು ಅವಕಾಶ ನೀಡಲಾಗಿದ್ದು, ನ್ಯಾಯಾಲಯವು ಆರೋಪಿಗಳು 2, 4 ಮತ್ತು 5ರವರಿಗೆ IPC 406 r/w 149ರಡಿ 3 ವರ್ಷಗಳ ಸಾದಾ ಕಾರಾಗೃಹ ವಾಸ, IPC 409 ಹಾಗೂ 420 r/w 149ರಡಿ ತಲಾ 3 ವರ್ಷಗಳ ಸಾದಾ ಕಾರಾಗೃಹ ವಾಸ ಮತ್ತು ತಲಾ ₹10,000 ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ 6 ತಿಂಗಳ ಹೆಚ್ಚುವರಿ ಕಾರಾಗೃಹ ವಾಸವನ್ನು ಅನುಸರಿಸುವಂತೆ ಆದೇಶಿಸಲಾಗಿದೆ. ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗುವಂತೆ ನ್ಯಾಯಾಲಯ ಸೂಚಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ರಮೇಶ್ ಅವರು ವಾದ ಮಂಡಿಸಿದ್ದಾರೆ.

Post a Comment

Previous Post Next Post