Top News

10 ಸಾವಿರ ವರ್ಷಗಳ ಬಳಿಕ ಸ್ಫೋಟಗೊಂಡ 'ಹಾಯ್ಲಿ ಗುಬ್ಬಿ' ಜ್ವಾಲಾಮುಖಿ ; ಆಫ್ರಿಕಾದಿಂದ ಭಾರತದ ಮೂಲಕ ಚೀನಾಕ್ಕೆ ಹಾದು ಹೋಗುತ್ತಿರುವ ಬೂದಿಯ ಮೋಡ ; ಹಾದಿ ತಪ್ಪಿದ ವಿಮಾನ ಸಂಚಾರ !

ಆಫ್ರಿಕಾ ಖಂಡದ ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿ ಸ್ಫೋಟಗೊಂಡ ಹಾಯ್ಲಿ ಗುಬ್ಬಿ ಜ್ವಾಲಾಮುಖಿಯಿಂದ ಹೊರಹೊಮ್ಮಿದ ದಟ್ಟ ಹಾರುಬೂದಿ ಮೋಡ ಭಾರತದ ವಾಯುಮಂಡಲವನ್ನೂ ಆವರಿಸಿದ್ದು, ದೆಹಲಿಯನ್ನು ಒಳಗೊಂಡಂತೆ ಹಲವಾರು ರಾಜ್ಯಗಳ ವಿಮಾನಯಾನಕ್ಕೆ ತೀವ್ರ ಅಡಚಣೆ ಉಂಟುಮಾಡಿದೆ. ಸಾವಿರಾರು ವರ್ಷಗಳ ಸುಪ್ತತೆಯ ಬಳಿಕ ಭಾನುವಾರ ಮರುಸ್ಫೋಟಗೊಂಡ ಈ ಜ್ವಾಲಾಮುಖಿಯ ಬೂದಿ ವಿಮಾನ ವಿಮಾನಯಾನದಲ್ಲಿ ಗೊಂದಲ ಸೃಷ್ಟಿಸಿದೆ.


ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಳು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಪಡಿಸಲಾಗಿದ್ದು, ಕನಿಷ್ಠ 10 ವಿಮಾನಗಳು ವಿಳಂಬಗೊಂಡಿವೆ. ಏರ್ ಇಂಡಿಯಾ ಕೂಡ ತನ್ನ 13 ವಿಮಾನಗಳ ಸೇವೆಯನ್ನು ರದ್ದುಪಡಿಸಿದ ಕಾರಣ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿತ್ತು. ದಿನಕ್ಕೆ 1,500ಕ್ಕಿಂತ ಹೆಚ್ಚು ಹಾರಾಟಗಳನ್ನು ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣವು ಸೋಮವಾರ ಅತ್ಯಂತ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸಿದ ದೃಶ್ಯ ಕಂಡುಬಂದಿತು.

ಜ್ವಾಲಾಮುಖಿಯಿಂದ 14 ಕಿಲೋಮೀಟರ್‌ ಎತ್ತರದವರೆಗೆ ಎದ್ದ ಬೂದಿ ಮೋಡವು ಬಲವಾದ ಮೇಲ್ಮಟ್ಟದ ಗಾಳಿಯ ವೇಗದ ಸಹಾಯದಿಂದ ಕೆಂಪು ಸಮುದ್ರವನ್ನು ದಾಟಿ ಯೆಮೆನ್ ಮತ್ತು ಒಮಾನ್ ಮೂಲಕ ಅರಬ್ಬಿ ಸಮುದ್ರದ ಮೇಲೆ ತೇಲಿ, ಭಾರತವನ್ನು ಪ್ರವೇಶಿಸಿದೆ. ಇದರಿಂದಾಗಿ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ದೆಹಲಿ–ಎನ್‌ಸಿಆರ್ ಪ್ರದೇಶಗಳಲ್ಲಿ  ಇದರ ಪರಿಣಾಮ ಕಂಡು ಬಂದಿತು.

ಕೆಲವು ಭಾಗಗಳಲ್ಲಿ ಮಂಜಿನಂತೆ ಕಾಣುವ ಬೂದಿ ಪದರ ಆವರಿಸಿತ್ತು. ದೆಹಲಿಯ ಗಾಳಿಯ ಗುಣಮಟ್ಟ ಕೂಡ ‘ಅತ್ಯಂತ ಕಳಪೆ’ ಮಟ್ಟಕ್ಕೆ ಇಳಿದಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಅಫಾರ್ ಪ್ರದೇಶದ ಈ ಜ್ವಾಲಾಮುಖಿ ಸುಮಾರು 10,000 ವರ್ಷಗಳ ನಂತರ ಮರುಸ್ಫೋಟಗೊಂಡಿರುವುದು ಜಗತ್ತಿನ ಹವಾಮಾನ ವಲಯಗಳ ಗಮನ ಸೆಳೆದಿದೆ. ಟೌಲೌಸ್ ಜ್ವಾಲಾಮುಖಿ ಬೂದಿ ಸಲಹಾ ಕೇಂದ್ರದ ಪ್ರಕಾರ, ಭಾನುವಾರ ಬೆಳಗಿನ ಜಾವ ಸ್ಫೋಟ ಆರಂಭವಾಗಿದ್ದು, ದೊಡ್ಡ ಪ್ರಮಾಣದ ಬೂದಿ ಗಾಳಿಯಲ್ಲಿ ಬೆರೆತು ದೂರದ ಪ್ರದೇಶಗಳವರೆಗೆ ತಲುಪಿದೆ. ಭಾರತೀಯ ಹವಾಮಾನ ಇಲಾಖೆ ಬೂದಿ ಮೋಡವು ನಿನ್ನೆ ರಾತ್ರಿ ಭಾರತವನ್ನು ದಾಟುತ್ತಿದ್ದು, ಈಗ(ಮಂಗಳವಾರ ರಾತ್ರಿ) ಚೀನಾದತ್ತ ಚಲಿಸುತ್ತಿರುವುದಾಗಿ ಮಾಹಿತಿ ನೀಡಿದೆ.

ದೇಶದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ತುರ್ತು ಎಚ್ಚರಿಕೆ ನೀಡಿದ್ದು, ಸುರಕ್ಷತೆಯನ್ನು ಕಾಪಾಡಿಕೊಂಡು ಸೂಕ್ತ ಸಮಯ, ಮಾರ್ಗ ಮತ್ತು ಇಂಧನ ನಿರ್ವಹಣೆಯಲ್ಲಿ ಜಾಗ್ರತೆ ವಹಿಸುವಂತೆ ಸೂಚಿಸಿದೆ. ಬೂದಿ ಮೋಡದಿಂದ ಉಂಟಾಗುವ ಎಂಜಿನ್ ಹಾನಿ, ಗೋಚರತೆ ಕುಸಿತ ಮತ್ತು ಹಾರಾಟದ ಅಡ್ಡಿಗಳನ್ನು ಗಮನಿಸಿ ಸಂಸ್ಥೆಗಳು ಪರಿಷ್ಕೃತ ಹಾರಾಟ ಯೋಜನೆಗಳನ್ನು ಅನುಸರಿಸುತ್ತಿವೆ.

ರಾತ್ರಿಯೊಳಗೆ ಬೂದಿ ಮೋಡ ಸಂಪೂರ್ಣವಾಗಿ ಭಾರತದಿಂದ ತೆರಳುವ ನಿರೀಕ್ಷೆ ಇದ್ದರೂ, ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅದರ ಪರಿಣಾಮ ಸ್ಪಷ್ಟವಾಗಿ ಗೋಚರಿಸಿತ್ತು. ಪ್ರಕೃತಿಯ ಆಕ್ರೋಶವು ಆಫ್ರಿಕಾದಿಂದ ಭಾರತವರೆಗೂ ತನ್ನ ಪರಿಣಾಮವನ್ನು ಬೀರುತ್ತಿದೆ.

Post a Comment

Previous Post Next Post