ಬೆಳ್ತಂಗಡಿ: ಧರ್ಮಸ್ಥಳ ದೇವಸ್ಥಾನ ವಠಾರದಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ರೂ. 5.32 ಲಕ್ಷ ಮೌಲ್ಯದ 76 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಮಹಿಳೆಯರನ್ನು ಬಂಧಿಸಿ ವಿಚಾರಣೆ ಮುಂದುವರಿಸಲಾಗಿದೆ.
ದಿನಾಂಕ 03-05-2025 ರಂದು ದರ್ಶನಕ್ಕೆ ಬಂದಿದ್ದ ಲತಾ ಎಂಬುವರ ಬ್ಯಾಗಿನಲ್ಲಿ ಇರಿಸಿದ್ದ ರೂ. 6.79 ಲಕ್ಷ ಮೌಲ್ಯದ 97 ಗ್ರಾಂ ಚಿನ್ನಾಭರಣ ಕಳವಾಗಿದ್ದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 17/2025, BNS 2023 ರ ಕಲಂ 303(2)ರಂತೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಮೇರೆಗೆ 23-11-2025ರಂದು ಧರ್ಮಸ್ಥಳದ ದ್ವಾರದ ಬಳಿ, ಕಳ್ಳತನ ಮಾಡಲು ಬರುತ್ತಿದ್ದ ಹುಬ್ಬಳ್ಳಿ ನಗರದ ಸಟಲ್ಮೆಂಟ್ ನಿವಾಸಿ ಬಿ.ಬಿ. ಜಾನ್ (59) ಮತ್ತು ಆಕೆಯ ಮಗಳು ಆರತಿ @ ಮಸಾಬಿ @ ಅಸ್ಮಾ (34) ಇವರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ವೇಳೆ ಹುಬ್ಬಳ್ಳಿ ನಿವಾಸದಲ್ಲಿ ನಡೆಸಿದ ಶೋಧದಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪತ್ತೆ ಕಾರ್ಯಾಚರಣೆಯನ್ನು ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ವೃತ ನಿರೀಕ್ಷಕರು ಬಿ.ಜಿ. ಸುಬ್ಬಪುರ್ ಮಠ್, ಧರ್ಮಸ್ಥಳ ಪೊಲೀಸ್ ಉಪನಿರೀಕ್ಷಕರು ಸಮರ್ಥ್ ಆರ್. ಗಾಣಿಗೇರ ಹಾಗೂ ಸಿಬ್ಬಂದಿ ರಾಜೇಶ್, ಪ್ರಶಾಂತ್, ಸಂದೀಪ್, ಮಲ್ಲಿಕಾರ್ಜುನ್, ಶಶಿಕುಮಾರ್, ಮಂಜುನಾಥ್ ಪಾಟೀಲ್, ಪ್ರಮೋದಿನಿ, ಸುನಿತಾ, ಸೌಭಾಗ್ಯ, ದೀಪಾ ಮತ್ತು ಉಷಾ ಸೇರಿ ತಂಡದವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
Post a Comment