ICC Women's WC : ಪಾಕಿಸ್ತಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ ; ಹರ್ಮನ್ ಬಳಗಕ್ಕೆ 88ರನ್‌ಗಳ ಜಯ

2025ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್​ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ ಪಾಕಿಸ್ತಾನದ ಮಹಿಳಾ ತಂಡದ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಿ 88 ರನ್​ಗಳ ಅಂತರದಿಂದ ವಿಜಯ ಸಾಧಿಸಿದೆ.

ಕೊಲಂಬೊದ ಆರ್. ಪ್ರೇಮಾದಾಸ್ ಮೈದಾನದಲ್ಲಿ ಭಾನುವಾರ ನಡೆದ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಪ್ರತಿಕಾ ರಾವಲ್ ಮತ್ತು ಸ್ಮೃತಿ ಮಂದಾನ ವಿಶ್ವಾಸಾರ್ಹ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ತಂಡದ ಮೊತ್ತ 48 ರನ್ ಆಗಿದ್ದಾಗ ಮಂದಾನ ಔಟ್ ಆದರು.

ನಂತರ ಕ್ರೀಸ್‌ಗೆ ಬಂದ ಹರ್ಲಿನ್ ಡಿಯೊಲ್ 4 ಬೌಂಡರಿ, 1 ಸಿಕ್ಸರ್‌ಗಳೊಂದಿಗೆ 46 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕಪ್ತಾನೆ ಹರ್ಮನ್‌ಪ್ರೀತ್ ಕೌರ್ 19, ಜೆಮಿಮಾ ರಾಡ್ರಿಗಸ್ 32, ದೀಪ್ತಿ ಶರ್ಮಾ 25, ಸ್ನೇಹ್ ರಾಣ 20 ಹಾಗೂ ವಿಕೆಟ್‌ಕೀಪರ್ ರಿಚಾ ಘೋಷ್ 35 ರನ್ ಗಳಿಸಿದರು. ಈ ಎಲ್ಲರ ಕೊಡುಗೆಯಿಂದ ಭಾರತವು 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 248 ರನ್ ಗುರಿ ನೀಡಿತು.

ಈ ಮೊತ್ತ ಬೆನ್ನತ್ತಿದ ಪಾಕಿಸ್ತಾನ ಆರಂಭದಲ್ಲೇ ಎಡವಿತು.  ಕೇವಲ 20 ರನ್‌ಗಳಲ್ಲೇ ಇಬ್ಬರು ಓಪನರ್ಸ್ ಔಟ್ ಆದರು. ನಂತರ ಬಂದ ಸಿದ್ರಾ ಅಮಿನ್ ಧೈರ್ಯವಾಗಿ ಬ್ಯಾಟಿಂಗ್ ಮಾಡಿ 81 ರನ್ ಗಳಿಸಿದರು. ಆದರೆ ಹರ್ಮನ್‌ಪ್ರೀತ್ ಕೌರ್‌ಗೆ ಕ್ಯಾಚ್ ನೀಡಿದ ಕ್ಷಣದಲ್ಲಿ ಪಾಕಿಸ್ತಾನದ ನಿರೀಕ್ಷೆ ಮುರಿದುಬಿತ್ತು. ನಟಾಲಿಯಾ ಪರ್ವೈಜ್ 33 ರನ್ ಗಳಿಸಿದರು, ಆದರೆ ಇತರ ಆಟಗಾರ್ತಿಯರು 14 ರನ್ ಗಡಿ ದಾಟಲಿಲ್ಲ.

ಭಾರತದ ಪರ ಕ್ರಾಂತಿ ಗೌಡ ಮತ್ತು ದೀಪ್ತಿ ಶರ್ಮಾ ತಲಾ 3 ವಿಕೆಟ್ ಪಡೆದರೆ, ಸ್ನೇಹಾ ರಾಣ 2 ವಿಕೆಟ್ ಪಡೆದು ಗೆಲುವಿಗೆ ಮಿಂಚಿನ ಮುಕ್ತಾಯ ನೀಡಿದರು.

#cricket #iccwwc2025 #wwc2025 #indiacricket #indiavspakistan

Post a Comment

Previous Post Next Post