Top News

ಯುವ ರೆಡ್ ಕ್ರಾಸ್ ಮೂಲಕ ಮಾನವೀಯತೆಯ ಸಮಾಜ ನಿರ್ಮಾಣ ಅಗತ್ಯ: ನಿತ್ಯಶ್ರೀ ಬಿ.ವಿ.

ಮಂಗಳೂರು: ಮಾನವೀಯತೆಯ ಸಮಾಜ ನಿರ್ಮಾಣ ಮಾಡುವುದೇ ರೆಡ್ ಕ್ರಾಸ್‌ನ ಧ್ಯೇಯ. ರೆಡ್ ಕ್ರಾಸ್‌ನ ಏಳು ತತ್ವಗಳಾದ ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥತೆ, ಸ್ವಾತಂತ್ರ್ಯ, ಸ್ವಯಂಸೇವೆ, ಏಕತೆ ಮತ್ತು ಸಾರ್ವತ್ರಿಕತೆಯನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಯೆನೆಪೋಯ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ನಿತ್ಯಶ್ರೀ ಬಿ.ವಿ. ಅವರು ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ನಡೆದ ಯುವ ರೆಡ್ ಕ್ರಾಸ್ ಘಟಕದ ಓರಿಯೆಂಟೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಿನ್ಸಿಪಾಲ್ ಪ್ರೊ. ಗಣಪತಿ ಗೌಡ ಅವರು ಮಾತನಾಡಿ, ರೆಡ್ ಕ್ರಾಸ್ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ತೋರಿಸುತ್ತಿರುವ ಆಸಕ್ತಿಯನ್ನು ಪ್ರಶಂಸಿಸಿ, ಅವರ ಸೇವಾ ಮನೋಭಾವವನ್ನು ಮೆಚ್ಚಿದರು. ಕೋವಿಡ್ ಸಮಯದಲ್ಲಿ ನಗರದ ಪದವಿ ಕಾಲೇಜುಗಳ ಯುವ ರೆಡ್ ಕ್ರಾಸ್ ಸ್ವಯಂಸೇವಕರ ನಿಸ್ವಾರ್ಥ ಸೇವೆಯನ್ನು ಅವರು ಸ್ಮರಿಸಿದರು.
ಯುವ ರೆಡ್ ಕ್ರಾಸ್ ಸಂಯೋಜಕರಾದ ಡಾ. ಭಾರತಿ ಪಿಲಾರ್ ಅವರು, “ಒಮ್ಮೆ ರೆಡ್ ಕ್ರಾಸ್ ಸ್ವಯಂಸೇವಕನಾದವನು ಜೀವನ ಪರ್ಯಂತ ಸಮಾಜಮುಖಿ ಮನಸ್ಥಿತಿಯನ್ನು ಹೊಂದಿರುತ್ತಾನೆ. ವಿದ್ಯಾರ್ಥಿಗಳಲ್ಲಿ ತಾಳ್ಮೆ, ಪರೋಪಕಾರ, ಸಹಬಾಳ್ವೆ, ಕರುಣೆ ಮುಂತಾದ ಮೌಲ್ಯಗಳನ್ನು ರೂಢಿಸಿಕೊಳ್ಳುವುದರ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಯುವ ರೆಡ್ ಕ್ರಾಸ್ ಪ್ರಮುಖ ಪಾತ್ರವಹಿಸುತ್ತದೆ” ಎಂದು ಹೇಳಿದರು.
 ಡಾ. ಭಾರತಿ ಪಿಲಾರ್ ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಕಾರ್ಯದರ್ಶಿಗಳಾದ ಫರ್ನಾಜ್ ಬಾನು ವಂದಿಸಿ, ಮೇಘ ವಿ. ಶೇಟ್ ನಿರೂಪಿಸಿದರು.

Post a Comment

Previous Post Next Post