ಮುಂಬೈ: ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ 339 ರನ್‌ಗಳ ಸವಾಲನ್ನು ಎದುರಿಸಿದರೂ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಅದ್ಭುತ ಚೇಸಿಂಗ್ ಪ್ರದರ್ಶನ ನೀಡಿ, 7 ಬಾರಿಯ ಚಾಂಪಿಯನ್ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ದಾವಿಸಿದೆ.
ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ತಲುಪಿರುವುದು ಇದು ಮೂರನೇ ಬಾರಿ. ವಿಶೇಷವೆಂದರೆ, ತವರಿನ ನೆಲದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಭಾರತ ಇದೇ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಬಾರಿ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎರಡೂ ತಂಡಗಳು ಇರದಿರುವುದು ಇತಿಹಾಸ ಸೃಷ್ಟಿಸಿದೆ.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ 48.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 341 ರನ್‌ಗಳನ್ನು ಕಲೆಹಾಕಿ ಆಸ್ಟ್ರೇಲಿಯಾವನ್ನು ಮಣಿಸಿತು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.
ಜೆಮಿಮಾ ರೋಡ್ರಿಗಸ್ ಭಾರತದ ಗೆಲುವಿನ ನಾಯಕಿ :
9ನೇ ಎಸೆತದಲ್ಲಿ ಕ್ರೀಸ್‌ಗೆ ಬಂದ ಜೆಮಿಮಾ ರೋಡ್ರಿಗಸ್ ಆರಂಭದಿಂದ ಕೊನೆವರೆಗೂ ಅಜೇಯವಾಗಿ ನಿಂತು ಭಾರತದ ಗೆಲುವಿಗೆ ಮುನ್ನಡೆ ನೀಡಿದರು. 134 ಎಸೆತ ಎದುರಿಸಿದ 25 ವರ್ಷದ ಜೆಮಿಮಾ 14 ಬೌಂಡರಿಯೊಂದಿಗೆ ಅಜೇಯ 127 ರನ್ ಬಾರಿಸಿ ಭಾರತದ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದರು.
ಹರ್ಮಾನ್‌ಪ್ರೀತ್ ಜೊತೆ ಅದ್ಭುತ ಜೊತೆಯಾಟ : 59 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಭಾರತ ತಂಡಕ್ಕೆ ಜೆಮಿಮಾ–ಹರ್ಮಾನ್‌ಪ್ರೀತ್ ಜೋಡಿ ಆಧಾರವಾದರು. ನಾಯಕಿ ಹರ್ಮಾನ್‌ಪ್ರೀತ್ ಕೌರ್ 88 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್‌ನೊಂದಿಗೆ 89 ರನ್ ಬಾರಿಸಿ ತಾಳ್ಮೆಯ ಹಾಗೂ ಆಕ್ರಮಣದ ಸಂಯೋಜನೆಯ ಆಟ ತೋರಿದರು. ಮೂರನೇ ವಿಕೆಟ್‌ಗೆ ಇಬ್ಬರು 156 ಎಸೆತಗಳಲ್ಲಿ 167 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು.
ಹರ್ಮಾನ್‌ಪ್ರೀತ್ ಔಟಾದ ಬಳಿಕ ದೀಪ್ತಿ ಶರ್ಮ (24) ಜೊತೆ ಜೆಮಿಮಾ 38 ರನ್‌ಗಳ ಪಾಲುದಾರಿಕೆಯನ್ನು ಕಟ್ಟಿದರು. ಈ ಜೊತೆಯಾಟಗಳಿಂದ ಭಾರತ ತಂಡ ಗೆಲುವಿನತ್ತ ಮುನ್ನಡೆಸಿತು.
ದಾಖಲೆ ಪುಸ್ತಕದಲ್ಲಿ ಜೆಮಿಮಾ ಹೆಸರು :
ಜೆಮಿಮಾ ಬಾರಿಸಿದ ಶತಕ, ಮಹಿಳಾ ವಿಶ್ವಕಪ್ ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಭಾರತೀಯ ಬ್ಯಾಟರ್ ಬಾರಿಸಿದ ಕೇವಲ ಎರಡನೇ ಶತಕವಾಗಿದೆ. ಮೊದಲು 2017ರ ಸೆಮಿಫೈನಲ್‌ನಲ್ಲಿ ಹರ್ಮಾನ್‌ಪ್ರೀತ್ ಕೌರ್ ಅಜೇಯ 171 ರನ್ ಬಾರಿಸಿದ್ದರು. ವಿಶ್ವಕಪ್‌ನ ನಾಕೌಟ್ ಪಂದ್ಯದಲ್ಲಿ ಇಬ್ಬರು ಶತಕ ಬಾರಿಸಿದ ಎರಡನೇ ಸಂದರ್ಭವೂ ಇದೇ — 2022ರ ಫೈನಲ್‌ನಲ್ಲಿ ಅಲೀಸಾ ಹೀಲಿ ಮತ್ತು ನಟ್ ಸ್ಕೀವರ್ ಬ್ರಂಟ್ ಇಬ್ಬರೂ ಶತಕ ಬಾರಿಸಿದ್ದರು.
Post a Comment