ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

SL Bhairappa | ಕನ್ನಡ ಅಕ್ಷರ ಲೋಕದ ಹಿರಿಯ ಸಾಹಿತಿ ಎಸ್ಎಲ್ ಬೈರಪ್ಪ (94) ನಿಧನ

ಸರಸ್ವತಿ ಸಮ್ಮಾನ್ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಎಸ್ಎಲ್ ಬೈರಪ್ಪ (94) ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

‘ಪರ್ವ’, ‘ಉತ್ತರಕಾಂಡ’, ‘ವಂಶವೃಕ್ಷ’, ‘ಆವರಣ’ ಸೇರಿ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದ ಬೈರಪ್ಪನವರ ಸಾಹಿತ್ಯ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ‘ಗೃಹಭಂಗ’ ಧಾರಾವಾಹಿಯಾಗಿ ಬಂದಿದ್ದರೆ, ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಗಳು ಚಲನಚಿತ್ರಗಳಾಗಿವೆ. ಅವರ ಅನೇಕ ಕೃತಿಗಳು ಮರಾಠಿ, ಗುಜರಾತಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ.

1931 ಆಗಸ್ಟ್ 20ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರದಲ್ಲಿ ಜನಿಸಿದ ಬೈರಪ್ಪ, ಬಾಲ್ಯದಲ್ಲೇ ಬಡತನ ಮತ್ತು ಪ್ಲೇಗ್ ಮಹಾಮಾರಿಯಿಂದ ಕಷ್ಟಗಳನ್ನು ಅನುಭವಿಸಿದರೂ ತಾಯಿಯ ಧೈರ್ಯದಿಂದ ಶಿಕ್ಷಣ ಮುಂದುವರಿಸಿದರು. ಮೈಸೂರಿನಲ್ಲಿ ಪ್ರೌಢಶಿಕ್ಷಣ ಹಾಗೂ ಕಾಲೇಜು ವ್ಯಾಸಂಗ ಮಾಡಿ, ಎಂ.ಎ.ಯಲ್ಲಿ ಸುವರ್ಣ ಪದಕ ಪಡೆದರು. ನಂತರ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ” ಎಂಬ ಇಂಗ್ಲಿಷ್ ಪ್ರಬಂಧದ ಆಧಾರದ ಮೇಲೆ ಡಾಕ್ಟರೇಟ್ ಪದವಿ ಪಡೆದರು.

ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವವಿದ್ಯಾಲಯ ಹಾಗೂ ದೆಹಲಿಗಳಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ಅವರು, ಶಾಸ್ತ್ರೀಯ ಅಧ್ಯಯನದ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದರು. 1961ರಲ್ಲಿ ಪ್ರಕಟವಾದ ‘ಧರ್ಮಶ್ರೀ’ ಅವರ ಮೊದಲ ಕಾದಂಬರಿಯಾಗಿದ್ದು, ನಾಲ್ಕು ದಶಕಗಳಲ್ಲಿ ಒಟ್ಟು 21 ಕಾದಂಬರಿಗಳನ್ನು ಬರೆದಿದ್ದಾರೆ.

‘ವಂಶವೃಕ್ಷ’ ಕೃತಿಗೆ 1966ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿತ್ತು. ‘ದಾಟು’ ಕೃತಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಅವರ ‘ಪರ್ವ’ ಕಾದಂಬರಿ ಮಹಾಭಾರತಕಾಲದ ಸಮಾಜ, ಸಂಸ್ಕೃತಿ, ಜೀವನ ಮೌಲ್ಯಗಳು ಹಾಗೂ ಮೃತ್ಯುವಿನ ರಹಸ್ಯಗಳ ಆಳವಾದ ವಿಶ್ಲೇಷಣೆಯಿಂದ ಭಾರೀ ಚರ್ಚೆಗೆ ಗ್ರಾಸವಾಯಿತು.

ಎಸ್ಎಲ್ ಬೈರಪ್ಪ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪ್ರತಿಮವೆಂದು ಸಾಹಿತ್ಯ ಲೋಕ ಕಣ್ಣೀರಿನಿಂದ ಅವರನ್ನು ಸ್ಮರಿಸುತ್ತಿದೆ.

#slbhairappa #kannada #bhairappa #kannadanews
Previous Post Next Post