ಸೆಪ್ಟೆಂಬರ್ 24ರ ರಾತ್ರಿ 9.30ಕ್ಕೆ ಆಟೋ ಚಾಲಕ ಶೈಲೇಶ್ (28) ಕುದ್ರೋಳಿ ದೇವಸ್ಥಾನದ ಮುಖ್ಯದ್ವಾರದ ಬಳಿ ರಸ್ತೆ ಸಂಚಾರಕ್ಕೆ ತೊಂದರೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದು, ದಂಡ ವಿಧಿಸಲು ಮುಂದಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಚಾಲಕ, ₹500 ದುಡಿಯಲು ಎಷ್ಟು ಕಷ್ಟ ಇದೆ ಎಂದು ಹೇಳಿ, ಪೊಲೀಸರು ದಂಡ ವಿಧಿಸುತ್ತಿರುವುದನ್ನು ಪ್ರಶ್ನಿಸುತ್ತಾ, ವಿಡಿಯೋ ಮಾಡುತ್ತಾ ಇದ್ದಾನೆ. ಆಗ ಅಲ್ಲಿದ್ದ ಎಎಸ್‌ಐ ಒಬ್ಬರು, ಚಾಲಕನ ಬೆಲ್ಟ್ ಹಿಡಿದು “ನಿನ್ನನ್ನು ಬಿಡುವುದಿಲ್ಲ” ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಇತರ ಆಟೋ ಚಾಲಕರು ಸಹ ಸ್ಥಳದಲ್ಲಿ ಸೇರಿ, ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿದೆ. ಪೊಲೀಸರ ಮಾಹಿತಿ ಪ್ರಕಾರ, ನಂತರ ಆಟೋ ಚಾಲಕ ಶೈಲೇಶ್ ಸ್ವಯಂ ಪ್ರೇರಿತವಾಗಿ ಕ್ಷಮೆಯಾಚಿಸಿದ್ದು, ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾನೆ. ಚಾಲಕನ ವಿರುದ್ಧ ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಮತ್ತು ಪೊಲೀಸ್ ಅಧಿಕಾರಿಯ ಸೂಚನೆಯನ್ನು ಪಾಲಿಸದ ಕಾರಣಕ್ಕಾಗಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.