ಉಡುಪಿ : ಏಕೆಎಂಎಸ್ ಬಸ್ ಮಾಲಕ ರೌಡಿಶೀಟರ್ ಸೈಫುದ್ದೀನ್‌ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂ*ದ ಘಟನೆ ಮಲ್ಪೆಯಲ್ಲಿ ನಡೆದಿದೆ. ಗುಂಡಿಕ್ಕಿದ ಬಳಿಕವೂ ದುಷ್ಕರ್ಮಿಗಳು ಮತ್ತಷ್ಟು ಹಲ್ಲೆ ನಡೆಸಿದ್ದರು ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶಿಲನೆ ನಡೆಸಿದರು.
ಮಧ್ಯಾಹ್ನ ವೇಳೆಗೆ ಮನೆಗೆ ಬಂದಿದ್ದ ಸೈಫುದ್ದೀನ್ ಮೇಲೆ ಕಾರಿನಲ್ಲಿ ಬಂದಿದ್ದ ತಂಡವೊಂದು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಹರಿರಾಮ್ ಶಂಕರ್ ಅವರು, “ಕೃತ್ಯದಲ್ಲಿ ಮೂವರು ಭಾಗಿಯಾಗಿರುವ ಮಾಹಿತಿ ದೊರೆತಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ದಾಳಿಯ ಹಿಂದಿನ ಕಾರಣ ತನಿಖೆಯಿಂದ ಮಾತ್ರ ತಿಳಿದುಬರುತ್ತದೆ” ಎಂದು ತಿಳಿಸಿದ್ದಾರೆ.
ಘಟನೆಯ ನಂತರ ಮಲ್ಪೆ ಹಾಗೂ ಉಡುಪಿ ಪೊಲೀಸರು ನಾಕಾಬಂದಿ ಮಾಡಿ ತಪಾಸಣೆ ಚುರುಕುಗೊಳಿಸಿದ್ದಾರೆ. ಸೈಫುದ್ದೀನ್ ಉಡುಪಿ ನಗರದಲ್ಲಿ ಸಂಚರಿಸುತ್ತಿದ್ದ ಎಕೆಎಂಎಸ್ ಬಸ್ಸಿನ ಮಾಲೀಕರಾಗಿದ್ದರು. ಮಲ್ಪೆ ಠಾಣೆಯ ರೌಡಿಶೀಟರ್‌ಗಳ ಪಟ್ಟಿಯಲ್ಲಿದ್ದ ಇವರನ್ನು ಹಳೆಯ ವೈಷಮ್ಯದಿಂದಲೇ ಹತ್ಯೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಆತ್ರಾಡಿ ಮೂಲದ ಸೈಫುದ್ದೀನ್ ಇತ್ತೀಚೆಗಷ್ಟೇ ಮಲ್ಪೆಯಲ್ಲಿ ಹೊಸ ಮನೆ ಖರೀದಿಸಿ ಅಲ್ಲಿ ವಾಸವಾಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ಸಮಯದಲ್ಲಿ ದಾಳಿಕೋರರು ಕೊಲೆ ನಡೆಸಿದ್ದಾರೆ.