ಮಂಗಳೂರು : ರಾಷ್ಟ್ರೀಯ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್ 2025ರ 9ನೇ ಆವೃತ್ತಿಯ ಗ್ಯ್ರಾಂಡ್ ಫಿನಾಲೆ ಬೆಂಗಳೂರಿನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಜರಗಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಂಗಳೂರಿನ ವನಿತೆಯರು, ಯುವತಿಯರು ಹಾಗೂ ಮಕ್ಕಳು ಬಹುತೇಕ ಎಲ್ಲಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವುದು ಮಂಗಳೂರಿಗರ ಹೆಮ್ಮೆಗೆ ಕಾರಣವಾಗಿದೆ.
ಬೆಂಗಳೂರಿನ ಕಿಂಗ್ಸ್ ಮೆಡೋಸ್‌ನಲ್ಲಿ ರಾಷ್ಟ್ರೀಯ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್ 9ನೇ ಆವೃತ್ತಿ ಸ್ಪರ್ಧೆ ಮೂರು ದಿನಗಳ ಕಾಲ ವಿವಿಧ ಚಟುವಟಿಕೆಗಳ ಮೂಲಕ ನಡೆಯಿತು. ಸೆ.6ರ ಶನಿವಾರ ಸಂಜೆ ಗ್ರ್ಯಾಂಡ್ ಫಿನಾಲೆ ನಡೆಯಿತು.
ಕಿರೀಟ ಪಡೆದುಕೊಂಡ ಮಂಗಳೂರಿಗರ ವಿವರಗಳು :
ಮಿಸ್ ವಿಭಾಗದಲ್ಲಿ ಮಿಸ್ ಇಂಡಿಯಾ ಆಸ್ಟ್ರಲ್ ಇಂಟರ್‌ನ್ಯಾಷನಲ್ ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ ಕಿರೀಟವನ್ನು ಆಶ್ನಾ ಜೆವೆಲ್ ಡಿಸೋಜಾ ಗೆದ್ದುಕೊಂಡರು.
ಮಿಸೆಸ್ ವಿಭಾಗದಲ್ಲಿ ಮಿಸೆಸ್ ಇಂಡಿಯಾ ಅರ್ಥ್ ಇಂಟರ್ನ್ಯಾಷನಲ್ ಕಿರೀಟವನ್ನು ತಶ್ಮಾ ಚೇತನ್ ತಮ್ಮದಾಗಿಸಿಕೊಂಡರು.
ಮಿಸೆಸ್ ಇಲೈಟ್ ಟೂರಿಸಂ ಕ್ವೀನ್ ಪ್ರಶಸ್ತಿಯನ್ನು ಯಶೋಧಾ ರಾಜೇಶ್ ಪಡೆದುಕೊಂಡರು. ಟೀನ್ ವಿಭಾಗದಲ್ಲಿ ಟೀನ್ ಮಿಸ್ ಇಂಡಿಯಾ ಪ್ರಶಸ್ತಿಯನ್ನು ರಕ್ಷಿತಾ ನಾಯರ್ ಪಡೆದುಕೊಂಡರೆ ನಿಯತಿ ಪ್ರಥಮ ರನ್ನರ್ ಅಪ್ ಹಾಗೂ ಸಾನ್ವಿ ಆರ್. ತೃತೀಯ ರನ್ನರ್ ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಜೂನಿಯರ್ ವಿಭಾಗದಲ್ಲಿ ಜೂನಿಯರ್ ಮಿಸ್ ಇಂಡಿಯಾ ಕಿರೀಟವನ್ನು ಸಿಂಚನಾ ಎಲ್. ಪಡೆದುಕೊಂಡಿದ್ದು, ರಾಹಿನಿ ಪಿ.ಪೂಜಾರಿ ಪ್ರಥಮ ರನ್ನರ್ ಅಪ್, ವಿಯಾ ಸಾಯಿ ತೃತೀಯ ರನ್ನರ್ ಅಪ್ ಕಿರೀಟವನ್ನು ಪಡೆದುಕೊಂಡರು.
ಪ್ರಿ ಜೂನಿಯರ್ ವಿಭಾಗದಲ್ಲಿ ಸನ್ವಿತಾ ಡಿಸೋಜಾ ಪ್ರಿ ಜೂನಿಯರ್ ಮಿಸ್ ಇಂಡಿಯಾ ಕಿರೀಟ ಪಡೆದುಕೊಂಡರು. ಲಿಟಲ್ ವಿಭಾಗದಲ್ಲಿ ಚಾರ್ವಿ ಅಶ್ವಿನ್ ಲಿಟಲ್ ಮಿಸ್ ಇಂಡಿಯಾ ಕಿರೀಟ ಪಡೆದುಕೊಂಡರು. ಲಿಟಲ್ ಮಿ.ಇಂಡಿಯಾ ಪ್ರಶಸ್ತಿಯನ್ನು ಆದೀಶ್ ಪಡೆದುಕೊಂಡಿದ್ದು, ಲಹರ್ ಸಾಯಿ ಪ್ರಥಮ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಪ್ರಿ ಜೂನಿಯರ್ ಮಿ.ಇಂಡಿಯಾ ಸ್ಪರ್ಧೆಯಲ್ಲಿ ಶೌರ್ಯ ರಾವ್ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು.
ಸ್ಪರ್ಧೆಯಲ್ಲಿ ನಾನಾ ಕಡೆಯಿಂದ ಆಗಮಿಸಿದ 45ಕ್ಕೂ ಅಧಿಕ ಸ್ಪರ್ದಿಗಳು ಪಾಲ್ಗೊಂಡಿದ್ದರು.
ಬೆಂಗಳೂರಿನಲ್ಲಿ ಪ್ರತಿಭಾ ಸೌನ್ಶಿಮಠ್ ಅವರ ನೇತೃತ್ವದಲ್ಲಿ ನಡೆದ ಈ ಸೌಂದರ್ಯ ಸ್ಪರ್ಧಾಕೂಟದಲ್ಲಿ ಪ್ರಶಸ್ತಿ ಪಡೆದುಕೊಂಡ ಮಂಗಳೂರಿನ ಸ್ಪರ್ಧಿಗಳು ನಗರದ ಪಾತ್ ವೇ ಮಾಡೆಲಿಂಗ್ ಸ್ಟುಡಿಯೋದಲ್ಲಿ ದೀಪಕ್ ಗಂಗೂಲಿ ಅವರಿಂದ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕರೂ ಆದ ಮರ್ಸಿ ವೀಣಾ ಡಿಸೋಜಾ ಸೇರಿದಂತೆ ಹಲವು ಮಂದಿ ಗಣ್ಯರು ಇದ್ದರು.