ಮಂಗಳೂರು, ಸೆ. 09 : ಮಂಗಳೂರಿನ ಕೂಳೂರಿನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳಾ ಸ್ಕೂಟರ್ ಸವಾರೆಯೊಬ್ಬರು ಮೃತಪಟ್ಟಿದ್ದಾರೆ.
ಸುರತ್ಕಲ್ ಕುಳಾಯಿ ನಿವಾಸಿ ಮಾಧವಿ (44) ಅವರು ತಮ್ಮ ಸ್ಕೂಟರಿನಲ್ಲಿ ಕುಳಾಯಿ ಕಡೆಯಿಂದ ಕುಂಟಿಕಾನ ಕಡೆಗೆ ರಾಷ್ಟ್ರೀಯ ಹೆದ್ದಾರಿ-66 ರ ಮೂಲಕ ತೆರಳುತ್ತಿದ್ದ ವೇಳೆ ಬೆಳಿಗ್ಗೆ ಸುಮಾರು 8.30ಕ್ಕೆ ಕೂಳೂರಿನ ರಾಯಲ್ ಓಕ್ ಮುಂಭಾಗದಲ್ಲಿ ಈ ದುರಂತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದ ದೊಡ್ಡ ರಸ್ತೆಗುಂಡಿಗೆ ಸ್ಕೂಟರ್ ಬಿದ್ದು, ಅವರು ಅಚಾನಕ್ ರಸ್ತೆ ಬದಿಗೆ ಬಿದ್ದಿದ್ದಾರೆ. ಈ ವೇಳೆ ಉಡುಪಿ ದಿಕ್ಕಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯನ್ನು ಚಾಲಕ ಮೊಹಮ್ಮದ್ ಫಾರೂಕ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ, ಲಾರಿ ಚಕ್ರವು ಮಾಧವಿಯವರ ಮೇಲೆ ಹರಿದು, ಅವರು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯತನ ಮಾತ್ರವಲ್ಲ, ಹೆದ್ದಾರಿ ನಿರ್ವಹಣೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ರಸ್ತೆಯ ಗುಂಡಿಗಳನ್ನು ಸಮಯಕ್ಕೆ ಮುಚ್ಚದೆ ನಿರ್ವಹಣೆಯಲ್ಲಿ ಲೋಪ ತೋರಿದ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ.
ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರ.224/2025ರಲ್ಲಿ ಕಲಂ 281, 106(1) ಬಿ.ಎನ್.ಎಸ್ ಹಾಗೂ 198(ಎ) ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭವಾಗಿದೆ.