ವಿಶ್ವಕರ್ಮ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಭಾರತದ ಅನೇಕ ಭವ್ಯ ನಿರ್ಮಾಣಗಳು ಹಾಗೂ ಕಲಾತ್ಮಕ ರಚನೆಗಳ ಮೂಲ ವಿಶ್ವಕರ್ಮ ಹಾಗೂ ವಿಶ್ವಕರ್ಮ ಸಮುದಾಯದ ಶಿಲ್ಪಕೌಶಲ್ಯದಲ್ಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.
ಮಂಗಳೂರು ನಗರ ರಥಬೀದಿ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಬುಧವಾರ ವಿಶ್ವಕರ್ಮ ಜಯಂತಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕಾಮತ್, “ಪ್ರಾಚೀನ ಭಾರತದ ಅನೇಕ ಸ್ಮಾರಕಗಳು, ದೇವಾಲಯಗಳು, ಶಿಲ್ಪಕೃತಿಗಳು ಹಾಗೂ ವೈಭವಶಾಲಿ ಕಟ್ಟಡಗಳ ಮೂಲದಲ್ಲಿ ವಿಶ್ವಕರ್ಮ ಸಮುದಾಯದ ಶಿಲ್ಪಕೌಶಲ್ಯ ಅಡಗಿದೆ. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವರ ಕೌಶಲ್ಯ ದಾರಿದೀಪವಾಗಿದೆ. ಇಂದಿನ ಪೀಳಿಗೆ ವಿಶ್ವಕರ್ಮರ ಪರಂಪರೆ, ಕೌಶಲ್ಯ ಮತ್ತು ಶ್ರದ್ಧೆಯನ್ನು ಅಳವಡಿಸಿಕೊಂಡರೆ ರಾಷ್ಟ್ರದ ಅಭಿವೃದ್ಧಿ ದಾರಿಗೆ ಮತ್ತಷ್ಟು ಬಲ ಸಿಗಲಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಹರೀಶ್ ಆಚಾರ್ಯ ಪಿ. ಅವರು ವಿಶೇಷ ಉಪನ್ಯಾಸ ನೀಡಿದರು. “ವಿಶ್ವಕರ್ಮ ದೇವರನ್ನು ವಿಶ್ವಶಿಲ್ಪಿ ಎಂದು ಕರೆಯಲಾಗುತ್ತದೆ. ಅವರ ಸೃಜನಶೀಲ ಶಕ್ತಿಯಿಂದಲೇ ಸಮಾಜದ ಆರ್ಥಿಕ ಹಾಗೂ ಸಾಂಸ್ಕೃತಿಕ ಶಕ್ತಿ ವೃದ್ಧಿಯಾಗಿದೆ” ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸದಾಶಿವ ಉಳ್ಳಾಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ರಾಜೇಶ್ ಜಿ., ದೇವಾಲಯದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ, ಉಮೇಶ್ ಆಚಾರ್ಯ ಪಾಂಡೇಶ್ವರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.