ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಎಂಜಿಐಎಎಲ್) ಕ್ವಾಲಿಟಿ ಸರ್ಕಲ್ ಫೋರಂ ಆಫ್ ಇಂಡಿಯಾ (QCFI) ಆಯೋಜಿಸಿದ್ದ 34ನೇ ಅಧ್ಯಾಯ ಸಮಾವೇಶ “ಕ್ವಾಲಿಟಿ ಕಾನ್ಸೆಪ್ಟ್ಸ್ – CCQC 2025” ನಲ್ಲಿ ಆರು ಚಿನ್ನದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಸೆ.14ರಂದು ಬೆಂಗಳೂರಿನಲ್ಲಿ ನಡೆದ ಈ ಸಮಾವೇಶದಲ್ಲಿ 250ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಮಂಗಳೂರು ವಿಮಾನ ನಿಲ್ದಾಣವನ್ನು ಪ್ರತಿನಿಧಿಸಿದ ಆರು ತಂಡಗಳೂ ಚಿನ್ನದ ಗೌರವವನ್ನು ಗೆದ್ದುಕೊಂಡಿದ್ದು, ಪ್ರತಿಯೊಂದು ಯೋಜನೆಯೂ ಕೈಝೆನ್ ತತ್ವಗಳ ಆಧಾರಿತವಾಗಿತ್ತು.
ಇದರೊಂದಿಗೆ, ಎಂಜಿಐಎಎಲ್ ತನ್ನ ಕಾರ್ಯಾಚರಣಾ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 2024ರಲ್ಲಿ ಐದು ಹಾಗೂ 2023ರಲ್ಲಿ ಮೂರು ಚಿನ್ನದ ಪ್ರಶಸ್ತಿಗಳನ್ನು ಇದೇ ಸಮಾವೇಶದಲ್ಲಿ ಈ ವಿಮಾನ ನಿಲ್ದಾಣ ಪಡೆದುಕೊಂಡಿತ್ತು.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಎರಡನೇ ಅತಿ ಬ್ಯುಸಿ ವಿಮಾನ ನಿಲ್ದಾಣವಾಗಿದ್ದು, 2024-25ರಲ್ಲಿ 2.32 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದೆ. ಪ್ರಸ್ತುತ ಪ್ರತಿದಿನ 50ಕ್ಕೂ ಹೆಚ್ಚು ವಿಮಾನ ಸಂಚಾರಗಳನ್ನು ಈ ವಿಮಾನ ನಿಲ್ದಾಣ ಪೂರೈಸುತ್ತಿದೆ. ಸರಕು ಸಾರಿಗೆಯ ಕ್ಷೇತ್ರದಲ್ಲಿಯೂ ವರ್ಷಕ್ಕೆ 5,600 ಮೆಟ್ರಿಕ್ ಟನ್ ಗಿಂತ ಹೆಚ್ಚು ಏರ್ ಕಾರ್ಗೋ ಹ್ಯಾಂಡ್ಲಿಂಗ್ ಮಾಡುತ್ತಿದೆ.
ಜುಲೈ 2025ರಲ್ಲಿ, ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (ACI) ಗ್ರಾಹಕ ಅನುಭವಕ್ಕಾಗಿ ಲೆವೆಲ್ 4 ಮಾನ್ಯತೆಯನ್ನು ಎಂಜಿಐಎ ಪಡೆದಿದ್ದು, 5 ಮಿಲಿಯನ್ ಪ್ರಯಾಣಿಕರ ವಿಭಾಗದಲ್ಲಿ ಲೆವೆಲ್ 3 ಸಾಧಿಸಿದ ಭಾರತದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಗಳಿಸಿತ್ತು.