Top News

ಮಂಗಳೂರು : ಜಾತಿ ಗಣತಿ ವೇಳೆ 'ತೀಯಾ' ಸಮಾಜವು ಜಾಗೃತರಾಗಬೇಕೆಂದು ಕರೆ

ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರವು ಸೆ.22 ರಿಂದ ಅ.7ರವರೆಗೆ ರಾಜ್ಯದಾದ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಜಾತಿ ಆಧಾರಿತ ಜನಗಣತಿ ಸಮೀಕ್ಷೆಯನ್ನು ಕೈಗೊಳ್ಳಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ತೀಯಾ ಸಮಾಜದ ಕೇಂದ್ರ ಸಮಿತಿಯ ಅಧ್ಯಕ್ಷ ಸದಾಶಿವ ಉಳ್ಳಾಲ ಅವರು ಸಮಾಜದ ಸದಸ್ಯರಿಗೆ ಜಾಗ್ರತೆ ವಹಿಸುವಂತೆ ಕರೆ ನೀಡಿದರು.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಜನಗಣತಿ ಸಮೀಕ್ಷೆಯ ನಮೂನೆಯಲ್ಲಿ ಜಾತಿ ಕಾಲಂ (ಸಂಖ್ಯೆ 9)ನಲ್ಲಿ ‘ತೀಯಾ’ ಎಂದು ಮಾತ್ರ ನಮೂದಿಸಬೇಕು. ಅಧಿಕಾರಿಗಳು ದಾಖಲಿಸುವ ವಿವರಗಳು ಸರಿಯಾಗಿರುವುದನ್ನು ಪ್ರತಿಯೊಬ್ಬರೂ ಖಚಿತಪಡಿಸಿಕೊಳ್ಳಬೇಕು. ಹಿಂದಿನ ಸಮೀಕ್ಷೆಗಳಲ್ಲಿ ಸಂಭವಿಸಿದ ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ. ತಪ್ಪು ವಿವರಗಳಿಂದ ನಮ್ಮ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವ ಅಪಾಯವಿದೆ” ಎಂದು ಎಚ್ಚರಿಸಿದರು.

ತೀಯಾ ಸಮಾಜವೆಂದು ನಿಖರವಾಗಿ ನಮೂದಿಸಿದರೆ ಮಾತ್ರ ಸರ್ಕಾರ ನಮ್ಮ ಸಮುದಾಯದ ನಿಖರ ಸಂಖ್ಯೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸಮಾಜಕ್ಕೆ ಬೇಕಾದ ಹಕ್ಕುಗಳು ಮತ್ತು ಸೌಲಭ್ಯಗಳನ್ನು ವಿಸ್ತರಿಸುವಲ್ಲಿ ನೆರವಾಗುತ್ತದೆ. ಆದ್ದರಿಂದ ಬೆಳ್ಚಡ, ಮಲಯಾಳಿ ಬಿಲ್ಲವ ಎಂಬ ಬದಲು ‘ತೀಯಾ ಸಮಾಜ’ ಎಂದು ಮಾತ್ರ ದಾಖಲಿಸುವಂತೆ ಸಂಘಟನೆಗಳು ಒತ್ತಾಯಿಸುತ್ತವೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್, ಉಳ್ಳಾಲ ವಲಯದ ಅಧ್ಯಕ್ಷ ಜಯಂತ್ ಕೊಂಡಾಣ, ಆಡಳಿತ ಮುಖೇಸರ ಸುರೇಶ್ ಭಟ್ಟನಗರ್, ಚಿದಾನಂದ ಗುರಿಕಾರ, ದಿನೇಶ್ ಕುಂಪಲ, ಉಮೇಶ್ ಬೆಂಜನಪದವು, ಮಂಗಳೂರು ವಲಯದ ಅಧ್ಯಕ್ಷ ರಾಕೇಶ್ ಕುಮಾರ್, ಮಾಜಿ ಅಧ್ಯಕ್ಷ ಉಮೇಶ್ ಕುಮಾರ್, ಉಪಾಧ್ಯಕ್ಷ ರಾಜ್‌ಗೋಪಾಲ್, ಸುಧೀರ್, ಸರಳ ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Post a Comment

Previous Post Next Post