ನಮ್ಮ ವಾಟ್ಸಾಪ್ ಗುಂಪು ಸೇರಲು ಕ್ಲಿಕ್ ಮಾಡಿ

ಮಂಗಳೂರು: ರಸ್ತೆ ಗುಂಡಿಗೆ ಬಲಿಯಾದ ಪ್ರಕರಣ – ಕಾಂಗ್ರೆಸ್ ಎನ್‌ಎಚ್‌ಎಐ ಕಚೇರಿ ಮುತ್ತಿಗೆ


Mangaluru
: ಸುರತ್ಕಲ್‌ನಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಾಧವಿ ಎಂಬ ಮಹಿಳೆ ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಂಡಿಗಳನ್ನು ತಕ್ಷಣ ಸರಿಪಡಿಸುವಂತೆ ಆಗ್ರಹಿಸಿ, ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಯತ್ನಿಸಲಾಯಿತು.

ಅಣುಕು ಮೃತದೇಹವನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರು, ಎನ್‌ಎಚ್‌ಎಐ, ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಸ್ಥಳೀಯ ಸಂಸದರ ವಿರುದ್ಧ ಘೋಷಣೆ ಕೂಗಿದರು. ನಂತೂರು ಸಮೀಪದ ಎನ್‌ಎಚ್‌ಎಐ ಕಚೇರಿಗೆ ನುಗ್ಗಲು ಪ್ರಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರೂ, ಬಳಿಕ ಕೆಲವರು ಒಳನುಗ್ಗಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ್ ಆಳ್ವ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, “ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಿರುವುದರಿಂದ ಹಣ ಇಲ್ಲವೆಂಬ ಉದ್ದಟತನದ ಹೇಳಿಕೆ ನೀಡಿರುವ ಎನ್‌ಎಚ್‌ಎಐ ತಕ್ಷಣ ಗುಂಡಿಗಳನ್ನು ಮುಚ್ಚಿ ಜನರ ಪ್ರಾಣ ರಕ್ಷಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.

ಶಾಸಕ ಐವನ್ ಡಿ’ಸೋಜಾ, ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿ ಕಾರ್ಯಕ್ಕೆ ಸಾಕಷ್ಟು ಹಣವಿದ್ದರೂ ನಿರ್ಲಕ್ಷ್ಯದಿಂದ ಕಾರ್ಯ ನಡೆಯದಿರುವುದಾಗಿ ಆರೋಪಿಸಿದರು. ಯುವ ಮುಖಂಡ ಮಿಥುನ್ ರೈ, ಹೆದ್ದಾರಿ ಅವ್ಯವಸ್ಥೆಗೆ ಎನ್‌ಎಚ್‌ಎಐ, ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಸಂಸದರೇ ಕಾರಣವೆಂದು ದೂರಿದರು.
ಮುಖಂಡ ಪದ್ಮರಾಜ್, “ಮಾಧವಿ ರಸ್ತೆ ಗುಂಡಿಗೆ ಬಲಿಯಾದದ್ದು ಅಮಾಯಕ ಜೀವದ ನಷ್ಟ. ಹಲವು ಅಹಿತಕರ ಘಟನೆಗಳ ಬಳಿಕವೂ ನಿರ್ಲಕ್ಷ್ಯ ತೋರಲಾಗಿದೆ. ಬಿಜೆಪಿ ಸರ್ಕಾರ ಜನರ ಪ್ರಾಣಹಾನಿಗಿಂತ ರಾಜಕೀಯ ಹೇಳಿಕೆಗಳತ್ತ ಹೆಚ್ಚು ಗಮನ ಹರಿಸುತ್ತಿದೆ” ಎಂದು ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೇವಲ ತೇಪೆ ಹಾಕುವ ಬದಲು ಗುಣಮಟ್ಟದ ದುರಸ್ತಿ ಕಾರ್ಯ ನಡೆಸಬೇಕು ಹಾಗೂ ರಸ್ತೆ ಅವ್ಯವಸ್ಥೆಯಿಂದ ಸಾವಿಗೀಡಾದ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂಬ ಒತ್ತಾಯ ಪ್ರತಿಭಟನೆಯಲ್ಲಿ ಕೇಳಿಬಂದಿತು.

ಈ ಪ್ರತಿಭಟನೆಯಲ್ಲಿ ಜೆ.ಆರ್. ಲೋಬೋ, ಮಮತಾ ಗಟ್ಟಿ, ಶ್ಯಾಲೆಟ್ ಪಿಂಟೋ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಎಂ.ಎಸ್. ಮುಹಮ್ಮದ್, ಅನಿಲ್ ಕುಮಾರ್, ಪ್ರವೀಣ್ ಚಂದ್ರ ಆಳ್ವ, ವಿನಯರಾಜ್, ಹರಿನಾಥ್, ಭಾಸ್ಕರ ಕೆ., ಡೆನ್ನಿಸ್ ಡಿಸಿಲ್ವಾ ಮೊದಲಾದ ಮುಖಂಡರು ಭಾಗವಹಿಸಿದರು.
Previous Post Next Post