ಮಂಗಳೂರು : ಮಂಗಳೂರು ನಗರದಲ್ಲಿ ನಕಲಿ ಆಧಾರ್ ಕಾರ್ಡ್‌ಗಳು ಹಾಗೂ ಪಹಣಿ ಪತ್ರಗಳನ್ನು ಸಿದ್ಧಮಾಡಿ, ಅವನ್ನು ನೈಜ ದಾಖಲೆಗಳೆಂದು ತೋರಿಸಿ ವಿವಿಧ ಇಲಾಖೆಗಳಿಗೆ ಮತ್ತು ನ್ಯಾಯಾಲಯಕ್ಕೆ ನೀಡುವ ಮೂಲಕ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಪಡೆಯುತ್ತಿದ್ದ ವಂಚನೆ ಜಾಲ ಬಯಲಾಗಿದೆ.
ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಬ್ದುಲ್ ರೆಹಮಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನು ನಕಲಿ ದಾಖಲೆಗಳ ಮೂಲಕ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ವಿಚಾರ ಬಹಿರಂಗವಾಗಿದೆ. ವಿಚಾರಣೆಯಲ್ಲಿ ಆತನಿಗೆ ಸಹಕರಿಸುತ್ತಿದ್ದ ಕೊಡಿಯಾಲ್ ಬೈಲ್‌ನ ಕಂಪ್ಯೂಟರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ನಿಶಾಂತ್ ಕುಮಾರ್‌ನನ್ನೂ ಪೊಲೀಸರು ಬಂಧಿಸಿದ್ದಾರೆ.
ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗಳಿಗೆ ಜಾಮೀನು ಪಡೆಯುವಾಗ ನಕಲಿ ಆಧಾರ್ ಕಾರ್ಡ್‌ನಲ್ಲಿ ತಮ್ಮ ಫೋಟೋ ಅಳವಡಿಸಿಕೊಂಡು ನಕಲಿ ಹೆಸರಿನಲ್ಲಿ ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದ ಇನ್ನೂ ಕೆಲವರ ವಿಚಾರ ಬೆಳಕಿಗೆ ಬಂದಿದೆ.
ತನಿಖೆಯ ವೇಳೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಎರಡು ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ಕೊಡಿಸಲು ನಕಲಿ ಹೆಸರಿನಲ್ಲಿ ಹಾಜರಾಗಿದ್ದ ನಿತೀನ್ ಕುಮಾರ್ ಹಾಗೂ ಹಸನ್ ರಿಯಾಜ್ ಬಂಧಿತರಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಯಾಗಿದ್ದ ಬ್ರೋಕರ್ ಮಹಮ್ಮದ್ ಹನೀಫ್‌ನನ್ನೂ ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಬಪ್ಪನಾಡು ಗ್ರಾಮದ ಅಬ್ದುಲ್ ರೆಹಮಾನ್ (46), ತೊಕ್ಕೊಟ್ಟು ನಿವಾಸಿ ನಿಶಾಂತ್ ಕುಮಾರ್ (28), ಬಂಟ್ವಾಳದ ನಿತೀನ್ ಕುಮಾರ್ (31), ಸಜೀಪ ಮುನ್ನೂರು ನಿವಾಸಿ ಹಸನ್ ರಿಯಾಜ್ (46) ಹಾಗೂ ಕಾವೂರು ನಿವಾಸಿ ಮಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ.
ಈ ವಂಚನೆ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ. ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಡಿಸಿಪಿ ಮಿಥುನ್ ಎಚ್.ಎನ್. (ಕಾನೂನು & ಸುವ್ಯವಸ್ಥೆ) ಹಾಗೂ ಡಿಸಿಪಿ ಕೆ. ರವಿಶಂಕರ್ (ಅಪರಾಧ & ಸಂಚಾರ) ಅವರ ನಿರ್ದೇಶನದಲ್ಲಿ ಮಂಗಳೂರು ನಗರದ ಪೊಲೀಸರು ನಡೆಸಿದ್ದಾರೆ.