ಬಿಗ್ ಬಾಸ್ ಸೀಸನ್ 12ರಲ್ಲಿ ಅತೀ ಕಿರಿಯ ವಯಸ್ಸಿನ ಸ್ಪರ್ಧಿಯಾಗಿದ್ದರೂ, ಅತ್ಯಂತ ಹಿರಿಯ ಮಟ್ಟದ ಪಕ್ವತೆ (maturity) ಪ್ರದರ್ಶಿಸುತ್ತಿರುವ ಹುಡುಗಿಯ ಹೆಸರು ರಕ್ಷಿತಾ. ವಯಸ್ಸು ಅನುಭವಕ್ಕೆ ಅಡ್ಡಿಯಾಗದು ಎಂಬುದನ್ನು ತನ್ನ ಪ್ರತಿಯೊಂದು ನಡೆ, ಮಾತು ಮತ್ತು ನಿರ್ಧಾರಗಳ ಮೂಲಕ ಸಾಬೀತುಪಡಿಸುತ್ತಿರುವ ಸ್ಪರ್ಧಿ ಆಕೆ.
ಪ್ರಾರಂಭದಿಂದಲೇ ತುಳುನಾಡಿನ ಸಂಸ್ಕೃತಿ ಮತ್ತು ತುಳು ಭಾಷೆಯ ಮೇಲೆ ಅಪಾರ ಒಲವು ಹೊಂದಿರುವ ರಕ್ಷಿತಾ, ಅದನ್ನು ಯಾವುದೇ ಅಂಜಿಕೆ ಅಥವಾ ಅಳುಕು ಇಲ್ಲದೆ ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನವೂ ಹೆಮ್ಮೆಯಿಂದ ತೋರಿಸಿಕೊಂಡು ಬದುಕುತ್ತಿರುವುದು ವಿಶೇಷ. ತುಳು ಭಾಷೆಯನ್ನು ಕೇವಲ ಮಾತನಾಡುವ ಮಟ್ಟಕ್ಕೆ ಸೀಮಿತಗೊಳಿಸದೇ, ಅದಕ್ಕೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪರಿಚಯ ಮಾಡಿಸಿದ ತುಳುವೆದಿ ಪೊಣ್ಣು ಎಂಬ ಗೌರವ ಆಕೆಗೆ ಸಲ್ಲಬೇಕು.
ಟಾಸ್ಕ್‌ಗಳ ವಿಚಾರದಲ್ಲಿ ತನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯರಾದ ಪಳಗಿದ ಆಟಗಾರರ ಮಧ್ಯೆಯೇ ಸರಿಸಮಾನವಾಗಿ ನಿಂತು ಸ್ಪರ್ಧಿಸುವ ಧೈರ್ಯ ರಕ್ಷಿತಾಳ ಮತ್ತೊಂದು ಶಕ್ತಿ. ಕಷ್ಟದಲ್ಲೇ ಬೆಳೆದು, ಊರನ್ನು ಬಿಟ್ಟು ಮುಂಬೈನಲ್ಲಿ ತನ್ನ ಸ್ವಂತ ಕಾಲಿನ ಮೇಲೆ ನಿಂತು ಬದುಕು ಕಟ್ಟಿಕೊಂಡ ಆಕೆ, ಇಂದು ಅನೇಕ ಯುವಜನರಿಗೆ ಮಾದರಿಯಾಗುವಂತಹ ಗಟ್ಟಿಗಿತ್ತಿಯಾಗಿ ರೂಪುಗೊಂಡಿದ್ದಾಳೆ.
“ಶಾಲೆಯ ಪಾಠಕ್ಕಿಂತ ಜೀವನದ ಪಾಠ ದೊಡ್ಡದು” ಎಂಬ ಸಂದೇಶವನ್ನು ತನ್ನ ಬದುಕಿನ ಮೂಲಕ ಇಂದಿನ ಯುವಪೀಳಿಗೆಗೆ ಹೇಳುತ್ತಿರುವ ರಕ್ಷಿತಾ, ಒಬ್ಬ A Good Teacher ಆಗಿಯೂ ಕಾಣಿಸುತ್ತಾಳೆ. ದೊಡ್ಡ ದೊಡ್ಡ ಟಿವಿ ಸ್ಟಾರ್‌ಗಳ ಮಧ್ಯೆ ಯೂಟ್ಯೂಬ್ ಹಿನ್ನೆಲೆಯಿಂದ ಬಂದವರೂ ಕೂಡ ದೊಡ್ಡ ವೇದಿಕೆಯಲ್ಲಿ ಸ್ಪರ್ಧಿಸಬಹುದು ಎಂಬುದನ್ನು ಸಾಬೀತುಪಡಿಸಿದ ಸಾಹಸಕ್ಕೆ ಆಕೆಗೆ ಶ್ಲಾಘನೆ ಸಲ್ಲಬೇಕು.
ಇಂದು ರಕ್ಷಿತಾ ಕೇವಲ ತುಳುವರ ಮನಸ್ಸಲ್ಲ, ಇಡೀ ರಾಜ್ಯದ ಜನರ ಮನಸ್ಸನ್ನು ಗೆದ್ದಿದ್ದಾಳೆ. ಭಾಷೆ, ಸಂಸ್ಕೃತಿ, ಆತ್ಮಗೌರವ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿ ಆಕೆ ಹೊರಹೊಮ್ಮಿದ್ದಾಳೆ. ಇನ್ನು ತುಳು ಭಾಷೆಯನ್ನು ಹಾಸ್ಯಕ್ಕೆ ಒಳಪಡಿಸಿ, ವಿವಾದಗಳಿಂದಲೇ ಗುರುತಿಸಿಕೊಂಡು ಬಿಗ್ ಬಾಸ್ ಮನೆ ಪ್ರವೇಶಿಸಿದ ಕೆಲವರ ಕುರಿತು ಹೇಳಲು ಹೆಚ್ಚೇನೂ ಉಳಿದಿಲ್ಲ.
ಜಾತಿ, ಮತ, ಬೇಧ ಮರೆತು ಒಬ್ಬ ತುಳುನಾಡಿನ ಮಣ್ಣಿನ ಹುಡುಗಿಗೆ ಬೆಂಬಲ ನೀಡುವ ಸಮಯ ಇದು.
ತುಳುನಾಡಿನ ಹೆಮ್ಮೆ, ತುಳುವ ಮಣ್ಣಿನ ಮಗಳು ರಕ್ಷಿತಾ ಗೆದ್ದು ಬರಲಿ.
ಆಕೆಯ ಚಿಂತನೆಗಳು, ಬದುಕಿನ ಪಾಠಗಳು ಇನ್ನಷ್ಟು ಯುವಜನರಿಗೆ ಪ್ರೇರಣೆಯಾಗಲಿ.
Post a Comment