Top News

ಮಂಗಳೂರು ಸೇರಿದಂತೆ ಹಲವು ಬಸ್ ನಿಲ್ದಾಣಗಳಲ್ಲಿ ಸರಣಿ ಬ್ಯಾಗ್ ಕಳ್ಳತನ: ಅಂತರ್‌ಜಿಲ್ಲಾ ಕಳ್ಳನ ಬಂಧನ ; ₹6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ!

ಮಂಗಳೂರು: ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್‌ಗಳನ್ನು ಕಳ್ಳತನ ಮಾಡುತ್ತಿದ್ದ ಅಂತರ್‌ಜಿಲ್ಲೆ ಕಳ್ಳನನ್ನು ಮಂಗಳೂರು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತನಿಂದ ಒಟ್ಟು ₹6,47,920 ಮೌಲ್ಯದ 46.28 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ ₹5,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಜ.23 ರಂದು ಸಂಜೆ ಸುಮಾರು 7 ಗಂಟೆಗೆ ಇಬ್ಬರು ಮಹಿಳೆಯರು ಹಾಗೂ ಹಿರಿಯ ನಾಗರಿಕರು ಬೆಂಗಳೂರಿಗೆ ತೆರಳಲು ಬಸ್ಸಿನಲ್ಲಿ ಕುಳಿತಿದ್ದ ವೇಳೆ, ಸುಮಾರು 45 ಗ್ರಾಂ ಚಿನ್ನಾಭರಣ ಮತ್ತು ₹20,000 ನಗದು ಹೊಂದಿದ್ದ ಟ್ರಾಲಿ ಬ್ಯಾಗ್ ಕಳವಾಗಿತ್ತು. ಈ ಕುರಿತು ಮೊ.ನಂ.10/2026 ಕಲಂ 303(2), BNS-2023 ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು.

ಪ್ರಕರಣ ಪತ್ತೆಗಾಗಿ ರಚಿಸಲಾದ ವಿಶೇಷ ತಂಡವು ಸಹಾಯಕ ಪೊಲೀಸ್ ಆಯುಕ್ತರು, ಕೇಂದ್ರ ಉಪವಿಭಾಗದ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ, ಮಹಮ್ಮದ್ ಇಮ್ರಾನ್ ಎನ್.ಎಮ್ (44), ದಾಸವಾಳ ರಸ್ತೆ, ತ್ಯಾಗರಾಜ್ ಕಾಲೋನಿ, ಮಡಿಕೇರಿ ನಿವಾಸಿಯನ್ನು ಜ.28 ರಂದು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿ ಬಂಧಿಸಿತು. ಆರೋಪಿಯನ್ನು ಜ.29 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿತನು ಬಸ್ ನಿಲ್ದಾಣಗಳಲ್ಲಿ ಬೆಲೆಬಾಳುವ ಸೊತ್ತುಗಳಿರುವ ಬ್ಯಾಗ್‌ಗಳನ್ನು ಕಳ್ಳತನ ಮಾಡುವ ರೂಢಿಗತ ಅಪರಾಧಿಯಾಗಿದ್ದು, ಅವನ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ದುದ್ದ, ಕೊಮನೂರು, ಹಾಸನ ಬಡಾವಣೆ, ಹಾಸನ ನಗರ, ಚೆನ್ನರಾಯಪಟ್ಟಣ ನಗರ, ಮೈಸೂರು ದೇವರಾಜ ನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಬ್ಯಾಗ್ ಹಾಗೂ ಮನೆ ಕಳ್ಳತನ ಪ್ರಕರಣಗಳು ದಾಖಲಗೊಂಡಿವೆ.

ಹಾಸನ ಜಿಲ್ಲೆಯ ಮನೆ ಕಳ್ಳತನ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಆರೋಪಿತನ ವಿರುದ್ಧ ವಾರಂಟ್ ಕೂಡ ಜಾರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

Previous Post Next Post