ದಾವಣಗೆರೆ ತಾಲೂಕು ಗುಮ್ಮನೂರು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮದುವೆಯಾಗಿ ಕೇವಲ ಎರಡೂವರೆ ತಿಂಗಳಲ್ಲೇ ಪತ್ನಿ ತನ್ನ ಹಳೆಯ ಪ್ರಿಯಕರನ ಜೊತೆ ಪರಾರಿಯಾದ ಹಿನ್ನೆಲೆಯಲ್ಲಿ ಮನನೊಂದು ನವವಿವಾಹಿತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹರೀಶ್ (32) ಎಂಬ ಯುವಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿ ಸರಸ್ವತಿ ಬೇರೊಬ್ಬ ಯುವಕನೊಂದಿಗೆ ಓಡಿ ಹೋಗಿದ್ದು, ಬಳಿಕ ಪತಿಯ ವಿರುದ್ಧ ಕಿರುಕುಳ ಆರೋಪ ಮಾಡಿದ್ದಳು ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ತೀವ್ರ ವೇದನೆಗೆ ಒಳಗಾದ ಹರೀಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಪತ್ನಿ, ಅತ್ತೆ-ಮಾವ ಹಾಗೂ ಪತ್ನಿಯನ್ನು ಕರೆದುಕೊಂಡು ಹೋದ ಯುವಕ ಕಾರಣ ಎಂದು ಹರೀಶ್ ಉಲ್ಲೇಖಿಸಿದ್ದಾನೆ. ಜೊತೆಗೆ ತನ್ನ ಅಂತ್ಯಸಂಸ್ಕಾರವನ್ನು ಬಸವ ಧರ್ಮ ಪ್ರಕಾರ ನೆರವೇರಿಸುವಂತೆ ಕೂಡ ಬರೆದಿಟ್ಟಿದ್ದಾನೆ.
ಇದೇ ಘಟನೆಯಿಂದ ಮನನೊಂದು, ಮದುವೆ ಮಾಡಿಕೊಟ್ಟ ಯುವತಿಯ ಮಾವ ರುದ್ರೇಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತಷ್ಟು ಆಘಾತ ಮೂಡಿಸಿದೆ. ರುದ್ರೇಶ್ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ.
ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Post a Comment