Top News

ಬೈಕಂಪಾಡಿ ರೈಲ್ವೇ ಬ್ರಿಡ್ಜ್ ಬಳಿ ಭೀಕರ ಅಪಘಾತ: ಬೈಕ್ ಸವಾರನ ಬಲಗಾಲು ಮುರಿತ, ರಿಕ್ಷಾ ಚಾಲಕನ ಮಾನವೀಯತೆಗೆ ಮೆಚ್ಚುಗೆ



ಮಂಗಳೂರು: ಬೈಕಂಪಾಡಿ ರೈಲ್ವೇ ಬ್ರಿಡ್ಜ್ ಬಳಿ ಇಂದು ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನೊಬ್ಬನ ಬಲಗಾಲು ಮುರಿತಕ್ಕೊಳಗಾದ ದುರ್ಘಟನೆ ನಡೆದಿದೆ.

ಪಣಂಬೂರು ಕಡೆಯಿಂದ ಬರುತ್ತಿದ್ದ ಬೈಕ್ ಸವಾರ, ಬೈಕಂಪಾಡಿ ರೈಲ್ವೇ ಬ್ರಿಡ್ಜ್ ಮೇಲಿನ ಹೆದ್ದಾರಿ ತಡೆಗೋಡೆಯ ಸಿಮೆಂಟ್ ಸ್ಲ್ಯಾಬ್‌ಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ತೀವ್ರತೆಗೆ ಸವಾರನ ಬಲಕಾಲಿಗೆ ಗಂಭೀರ ಗಾಯಗಳಾಗಿವೆ.

ಅಪಘಾತದ ಬಳಿಕ ಗಾಯಾಳನ್ನು ಸಾರ್ವಜನಿಕರು ರಸ್ತೆ ಪಕ್ಕ ಮಲಗಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರಿಗೆ ಕರೆ ಮಾಡಿದರೂ ‘ಈಗ ಬರುತ್ತೇವೆ’ ಎಂಬ ಪ್ರತಿಕ್ರಿಯೆ ಹೊರತುಪಡಿಸಿ ಸ್ಥಳಕ್ಕೆ ತಕ್ಷಣ ಆಗಮಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆಕ್ರೋಶ ಉಂಟಾಗಿತ್ತು. ಈ ನಡುವೆ ಹಾದುಹೋಗುತ್ತಿದ್ದ ವಾಹನಗಳು ಹಾಗೂ ಆಂಬುಲೆನ್ಸ್‌ಗಳನ್ನು ನಿಲ್ಲಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಅದು ಫಲಕಾರಿಯಾಗಲಿಲ್ಲ.
ಈ ಸಂಕಷ್ಟದ ಸಂದರ್ಭದಲ್ಲಿ ರಿಕ್ಷಾ ಚಾಲಕರೊಬ್ಬರು ತಕ್ಷಣ ಧಾವಿಸಿ ಬಂದು, ಗಾಯಾಳುವನ್ನು ತಮ್ಮ ರಿಕ್ಷಾದಲ್ಲಿ ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ರಿಕ್ಷಾ ಚಾಲಕರ ಮಾನವೀಯ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

Post a Comment

Previous Post Next Post