Top News

ವಿನೂತನ ಶೈಲಿಯ ಶ್ವಾಸಕೋಶದ ಶಸ್ತ್ರ ಚಿಕಿತ್ಸೆ ಯಶಸ್ವಿ ; ಫಾದರ್ ಮಲ್ಲರ್ ಆಸ್ಪತ್ರೆಯಲ್ಲಿ ರೋಗಿಗೆ ಜೀವದಾನ

ಮಂಗಳೂರು : ಹಾಸನ ಮೂಲದ 38 ವರ್ಷದ ವ್ಯಕ್ತಿ ತೀವ್ರ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ವೇಳೆ, ಮಂಗಳೂರಿನ ಫಾದರ್ ಮಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡವು ಆಧುನಿಕ ತಂತ್ರಜ್ಞಾನ ಬಳಸಿ ಕ್ಲಿಷ್ಟಕರ ಹಾಗೂ ಅಪಾಯಕಾರಿ ಶ್ವಾಸಕೋಶ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ರೋಗಿಗೆ ಹೊಸ ಜೀವ ನೀಡಿದ್ದಾರೆ.

ರೋಗಿಯು ದೀರ್ಘಕಾಲದಿಂದ ತೀವ್ರ ಉಸಿರಾಟದ ತೊಂದರೆ, ಗಂಭೀರ ರಕ್ತಹೀನತೆ, ತೀಕ್ಷ್ಣ ಎದೆನೋವು ಮತ್ತು ನಿಶಕ್ತಿಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅವರು ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಹೆಚ್. ಪ್ರಭಾಕರ್ ಅವರನ್ನು ಸಂಪರ್ಕಿಸಿ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.

ಸಮಗ್ರ ತಪಾಸಣೆಯ ವೇಳೆ ರೋಗಿಗೆ ತೀವ್ರ ಶ್ವಾಸಕೋಶ ಕಾಯಿಲೆಯ ಜೊತೆಗೆ ರಕ್ತಚಲನವಲನದಲ್ಲಿ ಅಡಚಣೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆ ಇರುವುದನ್ನು ವೈದ್ಯರು ಪತ್ತೆಹಚ್ಚಿದರು. ಈ ಸ್ಥಿತಿ ಹೃದಯ ವೈಫಲ್ಯಕ್ಕೂ ಕಾರಣವಾಗಬಹುದೆಂದು ಅರಿತು ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಆನಂದ್ ಕೆ.ಟಿ. ಅವರ ಸಲಹೆ ಪಡೆಯಲಾಯಿತು.
ಸುಮಾರು ಆರು ಗಂಟೆಗಳ ಕಾಲ ನಡೆದ ವಿನೂತನ ಶೈಲಿಯ ಶಸ್ತ್ರ ಚಿಕಿತ್ಸೆಯಲ್ಲಿ ವೈದ್ಯರು ರಕ್ತದ ಹೆಪ್ಪುಗಟ್ಟುವಿಕೆಯನ್ನು ಯಶಸ್ವಿಯಾಗಿ ತೆರವುಗೊಳಿಸಿ ರಕ್ತಚಲನವಲನ ಸುಗಮಗೊಳಿಸಿದರು. ಈ ಅಪರೂಪದ ಚಿಕಿತ್ಸೆಯಲ್ಲಿ ಹೃದ್ರೋಗ ಶಾಸ್ತ್ರ ಅರಿವಳಿಕೆ ತಜ್ಞರಾದ ಡಾ. ಎಮ್.ಎಮ್. ಚೇತನಾ ಆನಂದ್ ಸಹಕರಿಸಿದರು. 

ಚಿಕಿತ್ಸೆ ನಂತರ ರೋಗಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ತಮ್ಮ ನಿವಾಸದಲ್ಲಿ ಸಹಜ ಜೀವನ ನಡೆಸುತ್ತಿದ್ದಾರೆ.
ಶಸ್ತ್ರ ಚಿಕಿತ್ಸೆಯ ಬಳಿಕ ಮಾತನಾಡಿದ ಡಾ. ಆನಂದ್, ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಈ ಮಾರಣಾಂತಿಕ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗಿದ್ದು, ರೋಗಿ ಸಂಪೂರ್ಣ ಚೇತರಿಸಿಕೊಂಡಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಫಾದರ್ ಮಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫೋಸಿನ್ ಲೂಕಸ್ ಲೋಬೋ ವೈದ್ಯಕೀಯ ತಂಡದ ಸಾಧನೆಯನ್ನು ಅಭಿನಂದಿಸಿ, ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ನೂತನ ಪ್ರವೃತ್ತಿ ಹಾಗೂ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೇವೆ ನೀಡುತ್ತಿದೆ ಎಂದು ಹೇಳಿದರು.

Post a Comment

Previous Post Next Post