ಮಂಗಳೂರು : ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ಕಾಲು ಕಳೆದುಕೊಂಡ ವ್ಯಕ್ತಿಯೊಬ್ಬರಿಗೆ 2.10 ಲಕ್ಷ ರೂಪಾಯಿ ಮೌಲ್ಯದ ಕೃತಕ ಕಾಲು ದೇಣಿಗೆ ನೀಡಿ, ಅವರ ಬದುಕಿಗೆ ಹೊಸ ಬೆಳಕು ತಂದಿದೆ.
ಕಾಸರಗೋಡು ತಾಲೂಕಿನ ಪೆರ್ಮುದೆ ಗ್ರಾಮದ 53 ವರ್ಷದ ಬಾಬು ಅವರು ಭೂತಾರಾಧನೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೈವ ನರ್ತಕರಾಗಿ ಕಾರ್ಯನಿರ್ವಹಿಸಿ ಜೀವನ ಸಾಗಿಸುತ್ತಿದ್ದರು. ಆದರೆ ತೀವ್ರ ಮಧುಮೇಹದಿಂದ ಬಳಲುತ್ತಿದ್ದ ಅವರ ಎಡ ಕಾಲು ಗ್ಯಾಂಗ್ರೀನ್‌ಗೆ ತುತ್ತಾಗಿ ಕತ್ತರಿಸುವ ಪರಿಸ್ಥಿತಿ ಎದುರಾದ ಪರಿಣಾಮ ನಡೆದಾಡಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದರು.
ಈ ಹಿನ್ನೆಲೆ ಬಾಬು ಅವರು ನಗರದ ಖ್ಯಾತ ವೈದ್ಯಕೀಯ ತಜ್ಞರು ಹಾಗೂ ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ದೇವದಾಸ್ ರೈ ಅವರನ್ನು ಸಂಪರ್ಕಿಸಿ ಆರ್ಥಿಕ ಸಹಾಯ ಕೋರಿದರು. ಬಾಬು ಅವರ ಸ್ಥಿತಿಯನ್ನು ಮನಗಂಡ ಡಾ. ರೈ ಅವರು, ಮಾನವೀಯತೆಯ ನೆಲೆಯಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಕಾರ್ಯಕಾರಿ ಸಮಿತಿಯ ಮುಂದೆ ವಿಷಯವನ್ನು ಮಂಡಿಸಿ, ಸಂಸ್ಥೆಯ ಸಮಾಜಸೇವಾ ಯೋಜನೆಯಡಿ 2.10 ಲಕ್ಷ ರೂ. ಮೌಲ್ಯದ ಕೃತಕ ಕಾಲನ್ನು ಮಂಜೂರು ಮಾಡಿಸಿದರು.
ಡಾ. ದೇವದಾಸ್ ರೈ ಅವರ “ಸೌರಭ್” ಚಿಕಿತ್ಸಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಾಬು ಅವರಿಗೆ ಕೃತಕ ಕಾಲು ಅಳವಡಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಮಾಜಿ ಅಧ್ಯಕ್ಷ ಸಂತೋಷ್ ಶೇಟ್ ಹಾಗೂ ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ ಉಪಸ್ಥಿತರಿದ್ದರು. ಕೃತಕ ಕಾಲಿನ ಸಹಾಯದಿಂದ ಇದೀಗ ಸುಗಮವಾಗಿ ನಡೆದಾಡುತ್ತಿರುವ ಬಾಬು ಅವರು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Post a Comment