ರಾಜ್ಯ ಮಟ್ಟದ ಜಿನ ಭಜನಾ ಸ್ಪರ್ಧೆ ಸೀಸನ್–9ರ ಪ್ರಯುಕ್ತ ಭಾರತೀಯ ಜೈನ್ ಮಿಲನ್, ವಲಯ–8ರ ಆಶ್ರಯದಲ್ಲಿ ಈ ಬಾರಿ ಮಂಗಳೂರು ಜೈನ್ ಮಿಲನ್‌ನ ಆತಿಥ್ಯದಲ್ಲಿ ಪಿಲಿಕುಳ ನಿಸರ್ಗಧಾಮದ ಸೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ 2026ರ ಜನವರಿ 3 ಮತ್ತು 4ರಂದು ಸೆಮಿಫೈನಲ್ ಹಾಗೂ ಫೈನಲ್ ಜಿನ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಭಾರತೀಯ ಜೈನ್ ಮಿಲನ್ ವಲಯ–8ರ ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಜೈನ್ ತಿಳಿಸಿದರು.
ಭಾರತದ ಸಮೃದ್ಧ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಪರಂಪರೆಯನ್ನು ಜನಸಾಮಾನ್ಯರೊಳಗೆ ಇನ್ನಷ್ಟು ಆಳವಾಗಿ ಬೆಳೆಸುವ ಉದ್ದೇಶದೊಂದಿಗೆ ಜಿನ ಭಜನಾ ಸ್ಪರ್ಧೆ ಸೀಸನ್–9ರ ಕಾರ್ಯಕ್ರಮವನ್ನು ಭವ್ಯವಾಗಿ ಆಯೋಜಿಸಲಾಗಿದೆ. ಈ ಎರಡು ದಿನಗಳಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ ಎಂದರು
ಅವರು ಗುರುವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜೈನ ಧರ್ಮದ ತತ್ವಗಳು, ಅಹಿಂಸೆ, ಆತ್ಮಶುದ್ಧಿ ಹಾಗೂ ಭಕ್ತಿ ಮಾರ್ಗವನ್ನು ಸಂಗೀತ, ಭಜನೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳ ಮೂಲಕ ಜನತೆಗೆ ತಲುಪಿಸುವುದಾಗಿದೆ. ಜೈನ ಸಂಪ್ರದಾಯದ ಗಣ್ಯ ಆಚಾರ್ಯರು, ಪೂಜ್ಯ ಸ್ವಾಮೀಜಿಗಳ ಆಶೀರ್ವಚನದೊಂದಿಗೆ ಸಮಾಜದ ಹಿರಿಯ ಪ್ರಮುಖ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಕ್ತಿ ಸಂಗೀತ, ಜಿನ ಭಜನೆಗಳು, ಶಾಸ್ತ್ರೀಯ ಹಾಗೂ ಸಮಕಾಲೀನ ಸಂಗೀತ ಪ್ರಸ್ತುತಿಗಳು ಮತ್ತು ಪ್ರೇರಣಾದಾಯಕ ಸಂದೇಶಗಳ ಮೂಲಕ ಎಲ್ಲ ವಯೋಮಾನದ ಜನರಿಗೂ ಆಧ್ಯಾತ್ಮಿಕ ಅನುಭವವನ್ನು ನೀಡಲಾಗುವುದು. ಖ್ಯಾತ ಕಲಾವಿದರು ಹಾಗೂ ಯುವ ಪ್ರತಿಭೆಗಳು ತಮ್ಮ ಕಲಾ ಸೇವೆಯನ್ನು ಸಮರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಲಿದ್ದಾರೆ.
ಈ ಜಿನ ಭಜನಾ ಸ್ಪರ್ಧೆಯು ಧರ್ಮ, ಸಂಸ್ಕೃತಿ ಮತ್ತು ಸಮಾಜವನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುವ ಮಹತ್ವದ ಪ್ರಯತ್ನವಾಗಿದ್ದು, ಭಕ್ತರು, ಸಂಗೀತಾಸಕ್ತರು ಹಾಗೂ ಸಾಂಸ್ಕೃತಿಕ ಮನಸ್ಸುಳ್ಳ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜೈನ್ ಮಿಲನ್ ವಲಯ–8ರ ಉಪಾಧ್ಯಕ್ಷ ಸುದರ್ಶನ್ ಜೈನ್, ಭಾರತೀಯ ಜೈನ್ ಮಿಲನ್ ಮಂಗಳೂರು ಅಧ್ಯಕ್ಷ ರತ್ನಾಕರ್ ಜೈನ್, ಕಾರ್ಯದರ್ಶಿ ವೈಶಾಲಿ ಪಡಿವಾಳ್ ಹಾಗೂ ಕೋಶಾಧಿಕಾರಿ ಪ್ರಿಯದರ್ಶಿನಿ ಉಪಸ್ಥಿತರಿದ್ದರು.
Post a Comment