Top News

ಮುಲ್ಕಿಯಲ್ಲಿ ಬಹುಮಾನ ಗೆದ್ದ ಕಂಬಳ ಕೋಣಗಳ ಮುಸ್ಲಿಂ ಮಾಲಕರಿಗೆ ಹಣಕ್ಕಾಗಿ ಬೇಡಿಕೆಯಿಟ್ಟು ಹಫ್ತಾ ವಸೂಲಿಗೆ ಯತ್ನ ; ಇಬ್ಬರನ್ನು ಬಂಧಿಸಿದ ಪೊಲೀಸರು

ಕೋಣಗಳನ್ನು ಸಾಕಿ ಕಂಬಳ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮುಲ್ಕಿಯ ಅಂಗಾರಗುಡ್ಡೆ–ಕೆಂಚನಕೆರೆ ನಿವಾಸಿ ಶಂಸುದ್ದೀನ್ ಅವರ ಮನೆಗೆ ನುಗ್ಗಿ ಹಣಕ್ಕಾಗಿ ಪೀಡಿಸಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು, ಈ ಸಂಬಂಧ ಮುಲ್ಕಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಂಗಾರಗುಡ್ಡೆ ಕೆಂಚನಕೆರೆಯಲ್ಲಿರುವ ಮುಂಬೈನಲ್ಲಿ ನೆಲೆಸಿರುವ ಬಂಟ ಸಮುದಾಯದ ವ್ಯಕ್ತಿಯೊಬ್ಬರಿಗೆ ಸೇರಿದ ಗದ್ದೆ ತೋಟದ ಜಾಗ ಹಾಗೂ ಮನೆಯನ್ನು ಶಂಸುದ್ದೀನ್ ಹಲವು ವರ್ಷಗಳಿಂದ ನೋಡಿಕೊಂಡು ಬರುತ್ತಿದ್ದು, ಮನೆ ಹಟ್ಟಿಯಲ್ಲಿ ಏಳು–ಎಂಟು ಕೋಣಗಳನ್ನು ಸಾಕುತ್ತಿದ್ದಾರೆ. ಶಂಸುದ್ದೀನ್ ಹಾಗೂ ಅವರ ಪುತ್ರ ತಾಜುದ್ದೀನ್ ಪ್ರತೀ ಕಂಬಳಕ್ಕೂ ಕೋಣಗಳನ್ನು ಕರೆದೊಯ್ಯುತ್ತಿದ್ದರು.

ಇತ್ತೀಚೆಗೆ ಮುಲ್ಕಿಯಲ್ಲಿ ನಡೆದ ಅರಸು ಕಂಬಳದಲ್ಲಿ ಶಂಸುದ್ದೀನ್ ಅವರ ಕೋಣಗಳಿಗೆ ಬಹುಮಾನ ಲಭಿಸಿತ್ತು. ಇದನ್ನು ನೆಪ ಮಾಡಿಕೊಂಡು, ಅಲ್ಲಿ ದೊರೆತ ಬಂಗಾರದ ಸರ ಹಾಗೂ ಹಣವನ್ನು ನೀಡಬೇಕೆಂದು ಹೇಳಿ ಗುರುವಾರ ಸಂಜೆ ಮೂವರು ಆರೋಪಿಗಳು ಶಂಸುದ್ದೀನ್ ಅವರ ಮನೆಗೆ ಬಂದಿದ್ದಾರೆ ಎನ್ನಲಾಗಿದೆ.

ಕಾರ್ನಾಡು ನಿವಾಸಿ ಶ್ಯಾಮಸುಂದರ್ ಹಾಗೂ ಕೆ.ಎಸ್. ರಾವ್ ನಗರದ ಅಕ್ಷಯ್ ಸೇರಿದಂತೆ ಮತ್ತೊಬ್ಬ ಆರೋಪಿಯು, ಶಂಸುದ್ದೀನ್ ಹಾಗೂ ಅವರ ಪುತ್ರ ಕೋಣಗಳನ್ನು ಸ್ನಾನ ಮಾಡಿಸುತ್ತಿದ್ದ ವೇಳೆ ಚಿನ್ನದ ಸರ ಮತ್ತು ಹಣ ನೀಡುವಂತೆ ಒತ್ತಾಯಿಸಿದ್ದಾರೆ. “ನೀವು ದನ–ಕೋಣಗಳನ್ನು ಸಾಕಿ ಕಡಿಯಲು ಕೊಡುತ್ತೀರಿ” ಎಂದು ಆರೋಪಿಸಿ ಹಣಕ್ಕಾಗಿ ಪೀಡಿಸಿದ್ದಲ್ಲದೆ, ಶಂಸುದ್ದೀನ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಘಟನೆ ವೇಳೆ ಆಸುಪಾಸಿನ ಹಿಂದು ನಿವಾಸಿಗಳು ಸ್ಥಳಕ್ಕೆ ಧಾವಿಸಿ ಹಲ್ಲೆಯನ್ನು ತಪ್ಪಿಸಿದ್ದು, ಹಣ ಕೇಳಿ ಬಂದವರನ್ನು ಓಡಿಸಿದ್ದಾರೆ. ಈ ಕುರಿತು ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ಯಾಮಸುಂದರ್ ಮತ್ತು ಅಕ್ಷಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಬಂಧಿತ ಆರೋಪಿ ಅಕ್ಷಯ್ ವಿರುದ್ಧ ಮುಲ್ಕಿ ಠಾಣೆಯಲ್ಲಿ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿವೆ.

Post a Comment

Previous Post Next Post