ನಟ ಕಿಚ್ಚ ಸುದೀಪ್ (Kichha Sudeep) ಹಾಗೂ ಅವರ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ವಿರುದ್ಧ ವ್ಯಕ್ತಿಯೊಬ್ಬರು ವಂಚನೆ ಆರೋಪ ಮಾಡಿದ್ದು, ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಕಾಫಿ ತೋಟದ ಮಾಲೀಕ ದೀಪಕ್ ಎಂಬುವವರು, ತಮ್ಮ ದೂರಿನಲ್ಲಿ, ನನಗೆ 90 ಲಕ್ಷ ರೂ. ನೀಡುವುದಾಗಿ ನಂಬಿಸಿ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೀಪಕ್ ಅವರ ಹೇಳಿಕೆಯಂತೆ, ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕಾಗಿ ತಮ್ಮ ಕಾಫಿ ತೋಟ ಹಾಗೂ ಮನೆವನ್ನು ಎರಡು ವರ್ಷಗಳ ಅವಧಿಗೆ ಅಗ್ರಿಮೆಂಟ್ ಮೂಲಕ ಬಾಡಿಗೆಗೆ ಪಡೆದುಕೊಳ್ಳಲಾಗಿತ್ತು. ಆದರೆ ಕೇವಲ ಎರಡು ತಿಂಗಳಲ್ಲೇ ಜಾಗ ಖಾಲಿ ಮಾಡಲಾಗಿದ್ದು, ಒಪ್ಪಂದದಂತೆ ಹಣವನ್ನು ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ, ಶೂಟಿಂಗ್ ನೆಪದಲ್ಲಿ ತಮ್ಮ ತೋಟದಲ್ಲಿದ್ದ ಕಾಫಿ ಗಿಡಗಳು ಹಾಗೂ ಮರಗಳಿಗೆ ಹಾನಿಯಾಗಿದ್ದು, ಇದರಿಂದಾಗಿ ದೊಡ್ಡ ಮಟ್ಟದ ನಷ್ಟ ಸಂಭವಿಸಿದೆ ಎಂದು ದೀಪಕ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 95 ಲಕ್ಷ ರೂ. ಪರಿಹಾರವನ್ನು ಅವರು ಬೇಡಿಕೆ ಇಟ್ಟಿದ್ದರು.
ಈ ಪ್ರಕರಣದಲ್ಲಿ ರಾಜಿ ಮಾತುಕತೆಯ ವೇಳೆ ನಟ ಸುದೀಪ್ ಅವರು 60 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ಇದುವರೆಗೂ ಕೇವಲ 10 ಲಕ್ಷ ರೂ. ಚೆಕ್ ಮಾತ್ರ ದೊರೆತಿದ್ದು, ಉಳಿದ ಹಣವನ್ನು ನೀಡದೆ ತೊಂದರೆ ನೀಡಲಾಗುತ್ತಿದೆ ಎಂದು ದೀಪಕ್ ದೂರಿನಲ್ಲಿ ತಿಳಿಸಿದ್ದಾರೆ.
ಹೀಗಾಗಿ ನಟ ಕಿಚ್ಚ ಸುದೀಪ್ ಹಾಗೂ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ತಮಗೆ ನ್ಯಾಯ ಹಾಗೂ ಪರಿಹಾರ ಒದಗಿಸಬೇಕು ಎಂದು ದೀಪಕ್ ಪೊಲೀಸ್ ದೂರಿನಲ್ಲಿ ಮನವಿ ಮಾಡಿದ್ದಾರೆ.
2016ರಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿ, ಚಿತ್ರೀಕರಣ ತಂಡ ತೋಟವನ್ನು ಹಾಳುಗೆಡವಿ, ಪರಿಹಾರ ನೀಡದೆ ವಂಚಿಸಿದೆ ಉಲ್ಲೇಖಿಸಲಾಗಿದೆ.
Post a Comment