ಕುಡುಪು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಕಿರು ಷಷ್ಟಿ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ–ಸಂಭ್ರಮದಿಂದ ವೈಭವೊಪೇತವಾಗಿ ಶುಕ್ರವಾರ ಜರಗಿತು.
ಮುಂಜಾನೆ ಶ್ರೀ ಅನಂತಪದ್ಮನಾಭ ದೇವರಿಗೆ ವಿಶೇಷ ಧನುಪೂಜೆ ನೆರವೇರಿಸಿ, ಪ್ರಾತಃಕಾಲದ ಪೂಜೆಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಬಳಿಕ ದೇವರಿಗೆ ವಿಶೇಷ ಕಲಶಾಭಿಷೇಕ, ಸಹಸ್ರನಾಮಾರ್ಚನೆ, ಅಷ್ಟೋತ್ತರ ಅರ್ಚನೆ ಸೇರಿದಂತೆ ವಿವಿಧ ಪೂಜಾ ಸೇವೆಗಳು ಸಮರ್ಪಿಸಲ್ಪಟ್ಟವು. ವಿಶೇಷ ಹರಿವಾಣ ನೈವೇದ್ಯ ಹಾಗೂ ಮಹಾ ನೈವೇದ್ಯ ಅರ್ಪಣೆಗೊಂಡಿತು.
ಮಧ್ಯಾಹ್ನ ಸರ್ವಾಭರಣ ಭೂಷಿತ ಶ್ರೀ ಅನಂತಪದ್ಮನಾಭ ದೇವರಿಗೆ ಕಿರು ಷಷ್ಟಿಯ ವೈಭವದ ಮಹಾಪೂಜೆ ನೆರವೇರಿತು. ನಂತರ ದೇವರ ಬಲಿ ಹೊರಟು ರಾಜಾಂಗಣದಲ್ಲಿ ವಿವಿಧ ವಾದ್ಯ ಸುತ್ತುಗಳೊಂದಿಗೆ ಸರ್ವಸೇವೆಗಳು ನಡೆಯಿತು. ಅನಂತರ ದೇವರು ಮಹಾ ರಥದ ಬಳಿ ಆಗಮಿಸಿ ವಿಶೇಷ ರಥಾರೋಹಣ ಕಾರ್ಯಕ್ರಮ ಜರಗಿತು. ಭಕ್ತರು ಗೋವಿಂದ ನಾಮಸ್ಮರಣೆಯೊಂದಿಗೆ ರಥಕ್ಕೆ ತೆಂಗಿನಕಾಯಿ ಒಡೆದು, ಕಿರು ಷಷ್ಟಿಯ ಮಹಾ ರಥವನ್ನು ರಾಜಾಂಗಣದಲ್ಲಿ ಭಕ್ತಿಯಿಂದ ಎಳೆದರು.
ಬಳಿಕ ಶ್ರೀ ದೇವರ ಮಹಾ ಅನ್ನಸಂತರ್ಪಣೆ ನಡೆಯಿತು. ಐದು ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ವೇಳೆ ಶ್ರೀ ಪದ್ಮನಾಭ ದೇವರ ಬಲಿ ಹೊರಟು ಉಡುಕೆ ಸುತ್ತು, ಚೆಂಡೆ ಸುತ್ತು ಸೇರಿದಂತೆ ವಿವಿಧ ವಾದ್ಯ ಸುತ್ತುಗಳೊಂದಿಗೆ ಸರ್ವಸೇವೆಗಳು ನಡೆಯಿತು. ದೇವರು ಮರುಕಳಿಸಿ ರಥದ ಬಳಿ ಆಗಮಿಸಿ ರಥಾರೋಹಣ ಕಾರ್ಯಕ್ರಮದ ಬಳಿಕ ರಾಜಾಂಗಣದಲ್ಲಿ ರಥವನ್ನು ಎಳೆಯಲಾಯಿತು. ನಂತರ ವಿಶೇಷ ಪಾಲಕಿ ಉತ್ಸವ ಹಾಗೂ ಭಕ್ತರಿಗೆ ಮಹಾಪ್ರಸಾದ ವಿತರಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಿತ್ರ ಮಂಡಳಿ (ರಿ), ಕುಡುಪು ಇವರಿಂದ ವಿಶೇಷ ಕಾರ್ಯಕ್ರಮಗಳು ನಡೆಯಿತು. ದೇವಳದ ಅನುವಂಶಿಕ ಆಡಳಿತ ಮುಕ್ತೇಸರರು, ಅನುವಂಶಿಕ ತಂತ್ರಿಗಳಾದ ಕೆ. ನರಸಿಂಹ ತಂತ್ರಿ, ಅನುವಂಶಿಕ ಅರ್ಚಕರಾದ ಕೆ. ಮನೋಹರ ಭಟ್, ಅನುವಂಶಿಕ ಪವಿತ್ರಪಾಣಿ ಕೆ. ಬಾಲಕೃಷ್ಣ ಕಾರಂತ, ಮುಕ್ತೇಸರ ಕೆ. ಭಾಸ್ಕರ, ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರವೀಣ್ ಸೇರಿದಂತೆ ಊರಪರವೂರ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕಾರ ನೀಡಿದರು.
Post a Comment