ಮಂಗಳೂರು : ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ವಿವಿಧ, ನಿಯತಕಾಲಿಕ ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಪಾಲ್ಗೊಂಡು ತಮ್ಮ ಜ್ಞಾನವನ್ನು ವೃದ್ಧಿಸಿದರೆ ಭವಿಷ್ಯದ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ, ಶೈಕ್ಷಣಿಕ ಸ್ಪರ್ಧಾಕೂಟದಲ್ಲಿ ಭಾಗವಹಿಸಲು ಪ್ರಥಮ ಆದ್ಯತೆ ಮತ್ತು ಗುರಿಯಿಟ್ಟುಕೊಂಡು ಸೋಲು ಗೆಲುವು ದ್ವಿತೀಯ ಉದ್ದೇಶವಾಗಿರಬೇಕು ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ| ಡಾ| ಶಹನವಾಜ಼್ ಮಾಣಿಪ್ಪಾಡಿ ಸಲಹೆ ನೀಡಿದರು.
ಅವರು ನಗರದ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ವೈದ್ಯಕೀಯ ಶಾಸ್ತ್ರ ವಿಭಾಗದ ಪದವಿ ಪೂರ್ವ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ 5ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಸ್ಪರ್ಧಾಕೂಟ “ಕಿಮ್ಸ್ ಯು.ಜಿ. ಮೆಡಿಕ್ವಿಜ್ 2025" ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸ್ಪರ್ಧಾ ಕೂಟದಲ್ಲಿ ಕಣಚೂರು ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ನೌಶೀನ್ ಮತ್ತು ಅಹಾದ್ ಜೋಡಿ ತಂಡವು ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಮೆಡಿಕ್ವಿಜ್ ಪ್ರಶಸ್ತಿ ಪಡೆಯಿತು. ಯೆನಪೋಯಾ ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ಸೂರ್ಯ ಶ್ರೀಧರನ್ ಮತ್ತು ಅತೀಫ್ ಸತ್ತಾರ್ ಜೋಡಿ ತಂಡವು ದ್ವಿತೀಯ ಸ್ಥಾನ ಗಳಿಸಿತು. ತೃತೀಯ ಸ್ಥಾನವನ್ನು ಕಣಚೂರು ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ಮಾಲಿಕ್ ರೆಹಾನ್ ಮತ್ತು ಶೇಖ್ ಅಫಿಝುಲ್ಲಾ ತಂಡವು ಪಡೆಯಿತು.
ಕಣಚೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರೊ| ಡಾ। ಶಹನವಾಜ್ ಮಾಣಿಪ್ಪಾಡಿ ಸ್ಪರ್ಧಾ ವಿಜೇತರ ಸಾಧನೆಯನ್ನು ಪ್ರಶಂಶಿಸಿ ಆಕರ್ಷಕ ಪ್ರಶಸ್ತಿ, ಬಹುಮಾನ ಹಾಗೂ ಪ್ರಶಸ್ತಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಿ ಅಭಿನಂದಿಸಿದರು.
ವೇದಿಕೆಯಲ್ಲಿ ಕಾಲೇಜಿನ ವೈದ್ಯಕೀಯ ಆಧೀಕ್ಷಕರಾದ ಪ್ರೋ। ಡಾ। ಕಿರಣ್ ಕುಮಾರ್, ಕಣಚೂರು ಆರೋಗ್ಯ ಮತ್ತು ವಿಜ್ಞಾನ ಸಲಹಾ ಸಮಿತಿಯ ಸದಸ್ಯರಾದ ಪ್ರೋ। ಡಾ। ಎಂ.ವಿ. ಪ್ರಭು ಉಪಸ್ಥಿತರಿದ್ದರು. ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಡಾ. ದೇವದಾಸ್ ರೈ ರವರು ಸ್ಪರ್ಧಾಕೂಟವನ್ನು ನಿರೂಪಿಸಿದ್ದರು. ಅವಿಭಾಜಿತ ದ.ಕ. ಜಿಲ್ಲೆಯ ವಿವಿಧ ವೈದ್ಯಕೀಯ ಶಿಕ್ಷಣ ಕಾಲೇಜಿನ 60 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದವು.
ಡಾ। ದೇವದಾಸ್ ರೈ ಸ್ವಾಗತಿಸಿದರು. ಡಾ। ಅಬ್ದುಲ್ ಕರೀಮ್ ಫಾರುಖಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಡಾ। ಪ್ರೀತಮ್ ಈ ಸ್ಪರ್ಧಾ ಕೂಟವನ್ನು ಸಂಘಟಿಸಿದ್ದರು. ಎಂ. ವಿ. ಮಲ್ಯರವರು ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ಪ್ರಾಯೋಜಿಸಿದ್ದರು.
Post a Comment