ಸಿದ್ಧಕಟ್ಟೆ : ಸಿದ್ಧಕಟ್ಟೆ ಕೋಡಂಗೆ ಮೂರನೇ ವರ್ಷದ “ವೀರ–ವಿಕ್ರಮ” ಜೋಡುಕರೆ ಕಂಬಳ ಕೂಟ ಅದ್ಧೂರಿಯಾಗಿ ಜರುಗಿತು. ಈ ಬಾರಿ ಕಂಬಳ ಪ್ರೇಮಿಗಳು ಮತ್ತು ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಒಟ್ಟು ಆರು ವಿಭಾಗಗಳಲ್ಲಿ ನಡೆದ ಸ್ಪರ್ಧೆಗೆ 132 ಜೋಡಿ ಕೋಣಗಳು ಕರೆಗೆ ಇಳಿದಿದ್ದು , ರೋಚಕ ಓಟಗಳು ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು.
ಕೂಟದಲ್ಲಿ ಕನೆಹಲಗೆ ವಿಭಾಗಕ್ಕೆ 3, ಅಡ್ಡಹಲಗೆಗೆ 7, ಹಗ್ಗ ಹಿರಿಯಕ್ಕೆ 12, ನೇಗಿಲು ಹಿರಿಯಕ್ಕೆ 28, ಹಗ್ಗ ಕಿರಿಯಕ್ಕೆ 20 ಮತ್ತು ನೇಗಿಲು ಕಿರಿಯ ವಿಭಾಗಕ್ಕೆ 62 ಜೋಡಿ ಕೋಣಗಳು ಭಾಗವಹಿಸಿದವು.
ಅಡ್ಡ ಹಲಗೆ ವಿಭಾಗದಲ್ಲಿ ನಾರ್ಯಗುತ್ತು ಕುವೆತ್ತಬೈಲಿನ ಸಂತೋಷ್ ರೈ ಬೋಳಿಯಾರ್ ಅವರ ಕೋಣಗಳು 12.38 ಸೆಕೆಂಡ್ ಸಮಯ ದಾಖಲಿಸಿ ಮೊದಲ ಸ್ಥಾನಕ್ಕೇರಿತು. ಬೈಂದೂರು ಮಹೇಶ್ ಪೂಜಾರಿ ಹಲಗೆ ಮುಟ್ಟಿದರು. ದ್ವಿತೀಯ ಸ್ಥಾನವನ್ನು ಇರುವೈಲು ದೊಡ್ಡಗುತ್ತಿನ ಜಗದೀಶ್ ಎಮ್. ಶೆಟ್ಟಿ ಅವರ ಕೋಣಗಳು (12.56 ಸೆಕೆಂಡ್) ಗಳಿಸಿತು. ರಾಘವೇಂದ್ರ ಪೂಜಾರಿ ಹಲಗೆ ಮುಟ್ಟಿದರು.
ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರಿನ ಭಾಸ್ಕರ ಎಸ್. ಕೋಟ್ಯಾನ್ ಅವರ ಕೋಣಗಳು 11.80 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದವು. ಕಕ್ಕೆಪದವು ಪೆಂರ್ಗಾಲಿನ ಕೃತಿಕ್ ಗೌಡ ಕೋಣಗಳನ್ನು ಓಡಿಸಿದ್ದರು. ಮಾಳ ಆನಂದ ನಿಲಯದ ಶೇಖರ ಎ. ಶೆಟ್ಟಿ “ಎ” ಅವರ ತಂಡ 12.07 ಸೆಕೆಂಡ್ ಸಮಯದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದು, ಕಾವೂರು ದೋಟ ಸುದರ್ಶನ್ ಈ ಜೋಡಿ ಕೋಣಗಳನ್ನ ಓಡಿಸಿದರು.
ಹಗ್ಗ ಕಿರಿಯ ವಿಭಾಗದಲ್ಲಿ ಲೊರೆಟ್ಟೊ ಮಹಲ್ ತೋಟದ ಆನ್ಯ ಅನಿಲ್ ಮಿನೇಜಸ್ ಅವರ ಕೋಣಗಳು 11.72 ಸೆಕೆಂಡ್ ಸಾಧನೆಯೊಂದಿಗೆ ಮೊದಲ ಸ್ಥಾನ ಪಡೆದರೆ, ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತಿನ ಕೌಶಿಕ್ ದಿನಕರ ಬಿ. ಶೆಟ್ಟಿ “ಎ” ಅವರ ಕೋಣಗಳು 12.78 ಸೆಕೆಂಡ್‌ನಲ್ಲಿ ದ್ವಿತೀಯ ಸ್ಥಾನ ಪಡೆಯಿತು.
ನೇಗಿಲು ಹಿರಿಯ ವಿಭಾಗ ತೀವ್ರ ಪೈಪೋಟಿಯ ವೇದಿಕೆಯಾಗಿದ್ದು, ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ ಅವರ ಕೋಣಗಳು 12.02 ಸೆಕೆಂಡ್ ಸಮಯದಲ್ಲಿ ಓಟ ಮುಕ್ತಾಯ ಮಾಡಿ ಪ್ರಥಮ ಸ್ಥಾನ ಪಡೆದವು. ಬೈಂದೂರು ವಿವೇಕ್ ಪೂಜಾರಿ ಓಡಿಸಿದರು. 12.06 ಸೆಕೆಂಡ್‌ನಲ್ಲಿ ಗುರಿ ತಲುಪಿದ ಶ್ರೀ ಮಹಮ್ಮಾಯಿ ಕಲ್ಲೇರಿ ಪಂಜಿಕುಡೆಲು ಗುತ್ತಿನ ನಾರಾಯಣ ಪೂಜಾರಿ ಅವರ ಕೋಣಗಳು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ಇದೇ ವೇಳೆ ನೇಗಿಲು ಕಿರಿಯ ವಿಭಾಗದಲ್ಲಿ ಮುನಿಯಾಲಿನ ಉದಯ್ ಕುಮಾರ್ ಶೆಟ್ಟಿ “ಎ” ಅವರ ಕೋಣಗಳು 11.52 ಸೆಕೆಂಡ್ ಅತ್ಯುತ್ತಮ ಸಮಯ ದಾಖಲಿಸಿ ಮೊದಲ ಸ್ಥಾನ ಪಡೆದರೆ, ಉಳೆಪಾಡಿ ಪುಲ್ಲೋಡಿಬೀಡು ಉದಯ್ ಶೆಟ್ಟಿ “ಎ” ಅವರ ಕೋಣಗಳು (11.83 ಸೆಕೆಂಡ್) ದ್ವಿತೀಯ ಸ್ಥಾನ ಪಡೆದುಕೊಂಡವು.
Post a Comment