ಮಂಗಳೂರು : ದೀರ್ಘಾವಧಿ ಮಧುಮೇಹ ಮಾರಕ ಕಾಯಿಲೆಯು ಅತೀ ಪುರಾತನ ಕಾಲದಿಂದ ಮನುಕುಲಕ್ಕೆ ಬಾಧಿಸುವ ಮಾರಣಾಂತಿಕ ಕಾಯಿಲೆಯಾಗಿದ್ದು, ಪ್ರಸ್ತುತ ದೇಶದಲ್ಲಿ ಲಕ್ಷಾಂತರ ಜನರನ್ನು ಬಾಧಿಸಿದೆ. ದೇಹದ ಆರೋಗ್ಯ ಮತ್ತು ವಿವಿಧ ಅಂಗಾಂಗಗಳ ಮೇಲೆ ಕಠಿಣ ದುಷ್ಪರಿಣಾಮ ಬೀರಿದೆ. ಈ ಕಾಯಿಲೆಯ ಮಾಹಿತಿ, ಜಾಗೃತಿ, ಮುಂಜಾಗ್ರತೆ, ಉಪಶಮನ ಚಿಕಿತ್ತೋಪಾಯ ಕ್ರಮದ ಬಗ್ಗೆ ಜ್ಞಾನದ ಅವಶ್ಯಕತೆ ಇದೆ” ಎಂದು ಕರ್ನಾಟಕ ವೈದ್ಯಕೀಯ ಮಂಡಳಿಯ ವೀಕ್ಷಕ ಪ್ರತಿನಿಧಿಯವರಾದ ಡಾ.ಮಹಮ್ಮದ್ ಇಸ್ಮಾಯಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕಣಚೂರು ವೈದ್ಯಕೀಯ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ಜರಗಿದ "ವಿಶ್ವ ಮಧುಮೇಹ ದಿನಾಚರಣೆ" ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿ ಇನಸುಲಿನ್ ಔಷಧದ ಆವಿಷ್ಕಾರ ಈ ಕಾಯಿಲೆಗೆ ವರದಾನ ಎಂದು ನುಡಿದರು.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷರಾದ ಡಾ.ಹಾಜಿ ಯು.ಕೆ. ಮೋನುರವರು ಈ ವೈದ್ಯಕೀಯ ಕಾರ್ಯಗಾರವನ್ನು ಉದ್ಘಾಟಿಸಿ ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ಆಯೋಜಿಸಿದ ವೈದ್ಯಕೀಯ ಕಾರ್ಯಗಾರದ ಸದುಪಯೋಗವನ್ನು ಪ್ರತಿನಿಧಿಗಳು ಪಡೆಯಬೇಕು ಮತ್ತು ಆರೋಗ್ಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿ ಕಾರ್ಯಗಾರಕ್ಕೆ ಶುಭಕೋರಿದರು.
ಸಂಘಟನಾ ಸಮಿತಿಯ ಅಧ್ಯಕ್ಷ ಹಾಗೂ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ದೇವದಾಸ್ ರೈ ಮಾತನಾಡಿ, ಮಧುಮೇಹ ಕಾಯಿಲೆಯು ಒಂದು ಆಧುನಿಕ ಜೀವನ ಶೈಲಿ ಪದ್ಧತಿಯ ಕಾಯಿಲೆ ಆಗಿದ್ದು, ಕೆಲಸ, ಕಾರ್ಯಗಳ ಒತ್ತಡ, ಬೊಜ್ಜು, ಅಧಿಕ ಸಕ್ಕರೆ ಅಂಶದ ಆಹಾರ ಸೇವನೆ ಮತ್ತು ವ್ಯಾಯಾಮ ರಹಿತ ಜೀವನ ಪ್ರಮುಖ ಕಾರಣವೆಂದು ನುಡಿದು ಅದರ ಲಕ್ಷಣಗಳು ಚಿಕಿತ್ಸಾ ಉಪಾಯ, ಕ್ರಮಗಳ ಬಗ್ಗೆ ವಿವರ ನೀಡಿದರು. ಈ ಕಾರ್ಯಗಾರದಲ್ಲಿ ಖ್ಯಾತ ವೈದ್ಯಕೀಯ ಶಾಸ್ತ್ರ ತಜ್ಞರು ಹಾಗೂ ಮಧುಮೇಹ ಕಾಯಿಲೆಯ ತಜ್ಞರುಗಳಾದ ಡಾ| ಸೌರಭ ಭಟ್, ಡಾ| ಪ್ರಶಾಂತ್ ಹುಬ್ಬಳ್ಳಿ, ಡಾ। ಸುದೀಪ್ ಕೆ.. ಡಾ| ಅಖಿಲಾ ಭಂಡಾರ್ಕರ್, ಡಾ। ವಿಜಯ್ ಕುಮಾರ್, ಡಾ| ಎಂ. ಪ್ರಜ್ಞ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾಯಿಲೆಯ ಕಾರಣಗಳು ಮತ್ತು ಲಕ್ಷಣಗಳು, ಉಪಶಮನ ಮತ್ತು ನಿರ್ವಹಣೆ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಡಾ| ದೇವದಾಸ್ ರೈಯವರು ಮಧುಮೇಹ ಕಾಯಿಲೆಯ ಬಗ್ಗೆ ರಸಪ್ರಶ್ನೆ ಸ್ಪರ್ಧಾಕೂಟವನ್ನು ಆಯೋಜಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ| ಶಹನವಾಜ್ ಮಾನಿಪ್ಪಾಡಿ, ಆಡಳಿತ ಅಧಿಕಾರಿಯಾದ ಡಾ|ರೋಹನ್ ಮೊನಿಸ್ ಉಪಸ್ಥಿತರಿದ್ದರು.
ಈ ವೈದ್ಯಕೀಯ ಕಾರ್ಯಗಾರದಲ್ಲಿ ಸುಮಾರು 190 ವೈದ್ಯರು, ವೈದ್ಯಕೀಯ ಶಿಕ್ಷಣ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಡಾ| ಶ್ರೀಕಾಂತ್ ಹೆಗ್ಡೆ ವಂದಿಸಿದರು. ಡಾ|| ಲಕ್ಷಿತಾ ಸುರೇಶ್ ಮತ್ತು ಡಾ| ಅಬ್ದುಲ್ ಫರೂಖ ಕಾರ್ಯಕ್ರಮ ನಿರೂಪಿಸಿದರು.
Post a Comment