Top News

ರೋಟರಿ 25ನೇ ವಾರ್ಷಿಕ ಚಿಣ್ಣರ ಉತ್ಸವಕ್ಕೆ ಚಾಲನೆ ; ಮಕ್ಕಳ ಸೇವೆ ದೇವರ ಸೇವೆಗೆ ಸಮಾನ : ಗುರುಕಿರಣ್

ಮಂಗಳೂರು ನ. 30: ನಗರದ ಸುತ್ತಮುತ್ತಲಿನಲ್ಲಿ ಕಾರ್ಯಚರಿಸುತ್ತಿರುವ 10 ಮಕ್ಕಳ ರಕ್ಷಣೆ ಮತ್ತು ಆರೈಕೆ
ಕೇಂದ್ರದ ಸುಮಾರು 430 ಮಕ್ಕಳಿಗೆ ಒದಗಿದ ಸುವರ್ಣ ಅವಕಾಶ, ಸಂತಸ, ಸಂಭ್ರಮ, ಉತ್ಸಾಹದ ವಾತಾವರಣ, ಒಡನಾಟದ ಅನುಬಂಧ ಮರೆಯಲಾದ ಪ್ರಬಂಧ, ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾದ ಮುಗ್ಧ ಮಕ್ಕಳು ಇತರ ಕೇಂದ್ರದ ಮಕ್ಕಳ ಜೊತೆಗೆ ಬೆರೆತು, ಮುಕ್ತವಾಗಿ ತಮ್ಮ ವ್ಯಥೆ, ಕಥೆ, ಕಷ್ಟ, ಚಿಂತೆ, ವೇದನೆಯನ್ನು ಮರೆತು, ಹುರುಪು ಹಾಗೂ ಉತ್ಸಾಹದಿಂದ ನಕ್ಕು ಕುಣಿದಾಡಿದರು. ಸ್ನೇಹ ಮತ್ತು ಒಡನಾಟವನ್ನು ಸ್ಮರಿಸಿ ತಮ್ಮ ವೈಯುಕ್ತಿಕ ವಿವಿಧ ಸಿಹಿ ಕಹಿ ಅನುಭವಗಳನ್ನು ವಿನಿಮಯಿಸಿದರು. 

ಆಕರ್ಷಕ ಪಥ ಸಂಚಲನ ನೀಡಿದ ಬಳಿಕ ಕ್ರೀಡಾ ಸ್ಫೂರ್ತಿಯಿಂದ ಮತ್ತು ಉತ್ಸಾಹದಿಂದ ತಮ್ಮಲ್ಲಿ ಹುದುಗಿದ ಕ್ರೀಡಾ ಸಾಮರ್ಥ್ಯ ಮತ್ತು ಗಾನ, ನೃತ್ಯ, ನಾಟಕ, ಕಲಾ, ಕೌಶಲ್ಯ, ಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು. ಪ್ರತಿಯೊಬ್ಬರ ಮುಖದ ಮೇಲೆ ಮಂದಹಾಸ ಬೀರುತ್ತಿತ್ತು.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ರೋಟರಿ 25 ವಾರ್ಷಿಕ “ಅಂತರ ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರದ ಚಿಣ್ಣರ ಉತ್ಸವ" ವನ್ನು ತಾ: 30.11.2025 ರಂದು ನಗರದ ಕೆನರಾ ಹೈಸ್ಕೂಲ್ ಉರ್ವ ಪ್ರಾಂಗಣದಲ್ಲಿ ಆಯೋಜಿಸಲಾಗಿತ್ತು.

ಖ್ಯಾತ ಕನ್ನಡ ಚಲನಚಿತ್ರ ಕಲಾವಿದ ಹಾಗೂ ಸಂಗೀತ ನಿರ್ದೇಶಕರಾದ ಡಾ. ಗುರುಕಿರಣ್ ರವರು ಸ್ಪರ್ಧಾಕೂಟವನ್ನು ಉದ್ಘಾಟಿಸಿ, "ರೋಟರಿ ಸಂಸ್ಥೆಯವರು ಚಿನ್ನರಿಗಾಗಿ ವಿನೂತನ ಪರಿಕಲ್ಪನೆಯನ್ನು ಆಯೋಜಿಸಿ ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಪ್ರಶಂಸನೀಯ" ಎಂದು ನುಡಿದು. ಮಕ್ಕಳ ಸೇವೆಯೇ ದೇವರ ಸೇವೆಗೆ ಸಮಾನ ಎಂದು ನುಡಿದು ಬಳಿಕ ಕನ್ನಡ ಚಲನಚಿತ್ರ ಆಪ್ತ ಮಿತ್ರದ "ಕಾಲವನ್ನು ತಡೆಯೋರು ಯಾರೂ ಇಲ್ಲ" ಹಾಡನ್ನು ಹಾಡಿ ಮಕ್ಕಳನ್ನು ರಂಜಿಸಿದರು.

ಸಂಘಟನಾ ಅಧ್ಯಕ್ಷ ರೋ। ಡಾ। ದೇವದಾಸ್ ರೈ ರವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಈ 25ನೇ ವಾರ್ಷಿಕ “ಚಿಣ್ಣರ ಉತ್ಸವ" ಕಾರ್ಯಕ್ರಮವು ತಮ್ಮ ಸಂಸ್ಥೆಯ ಪ್ರತಿಷ್ಠಿತ ಸಮಾಜದ ಶ್ರೇಯೋಭಿವೃದ್ಧಿ ಸೇವಾ ಚಟುವಟಿಕೆಯ ಅಂಗವಾಗಿದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಒದಗಿಸಿ ಅವರ ಉತ್ಸಾಹಕ್ಕೆ ಸ್ಪಂದಿಸಿ, ಪ್ರೋತ್ಸಾಹಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುವುದು, ಒಂದು ದಿನದ ಉತ್ಸಾಹ, ಸಂತಸ ಹೊರಹೊಮ್ಮಿಸುವುದು ನಮ್ಮ ಸಂಸ್ಥೆಯ ಮುಖ್ಯ ಧೈಯ, ಪ್ರಮುಖ ಉದ್ದೇಶ ಎಂದು ಮಾಹಿತಿ ನೀಡಿದರು.

ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೋ ಭಾಸ್ಕರ್ ರೈ ಸ್ವಾಗತಿಸಿದರು. ಜಿಲ್ಲಾ ರೋಟರಿ ವಲಯ ಸಹಾಯಕ ಗವರ್ನ‌್ರರಾದ ರೋ। ಚಿನ್ನಗಿರಿ ಗೌಡ ಮತ್ತು ವಲಯ ಪ್ರತಿನಿಧಿ ರೋ। ರವಿ ಜಲನ್ ಗೌರವ ಅತಿಥಿಯಾಗಿ ಭಾಗವಹಿಸಿ, ಸಂದೋರ್ಭುಜಿತವಾಗಿ ಮಾತನಾಡಿದರು. ರೋಟರಾಕ್ಟ್ ಸಂಸ್ಥೆಯ ಅಧ್ಯಕ್ಷ ರೋ । ಅಕ್ಷಯ್ ರೈ, ಕಾರ್ಯದರ್ಶಿ ರೋ। ವಿವೇಕ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ರೋ। ವಿಕಾಸ್ ಕೊಟ್ಯಾನ್ ವಂದಿಸಿದರು. ರೊ| ಕೆ.ಎಂ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಚುನಾಯಿತ ಗವರ್ನ‌್ರರಾದ ರೋ | ಸತೀಶ್ ಬೋಳಾರ್ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಿದರು.

Post a Comment

Previous Post Next Post