ಮೈಸೂರು ದಸರಾ ಮೈದಾನದಲ್ಲಿ ಬಲೂನ್ ಮಾರುತ್ತಿದ್ದ ಬಾಲಕಿಯ ಶವ ಪತ್ತೆ: ಅತ್ಯಾಚಾರ ಶಂಕೆ
ಮೈಸೂರು: ದಸರಾ ವಸ್ತುಪ್ರದರ್ಶನ ಮೈದಾನ ಪ್ರದೇಶದಲ್ಲಿ ಬಲೂನ್ ಮಾರಾಟಕ್ಕೆ ಬಂದಿದ್ದ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ಬಾಲಕಿ ಕಲಬುರಗಿಯಿಂದ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಕುಟುಂಬದ ಸದಸ್ಯೆ ಎಂದು ಗುರುತಿಸಲಾಗಿದೆ. ದಸರಾ ಹಬ್ಬದ ಸಮಯದಲ್ಲಿ ಬಲೂನ್ ಹಾಗೂ ಆಟಿಕೆಗಳ ಮಾರಾಟಕ್ಕಾಗಿ ಸುಮಾರು 50ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳು ಮೈಸೂರಿನ ದೊಡ್ಡಕೆರೆ ಮೈದಾನದ ಸುತ್ತಮುತ್ತ ತಂಗಿದ್ದವು.
ಬುಧವಾರ ರಾತ್ರಿ ವ್ಯಾಪಾರ ಮುಗಿಸಿ ಬಾಲಕಿ ತಂದೆ-ತಾಯಿಯೊಂದಿಗೆ ಮಲಗಿದ್ದಳು. ಮುಂಜಾನೆ ಮಳೆ ಬಂದು ಎಲ್ಲರೂ ಎದ್ದಾಗ ಬಾಲಕಿ ಕಾಣೆಯಾಗಿದ್ದಳು. ಬಳಿಕ ಹುಡುಕಾಟ ನಡೆಸಿದ ವೇಳೆ, ಟೆಂಟ್‌ನಿಂದ ಸುಮಾರು 50 ಮೀಟರ್ ದೂರದಲ್ಲಿರುವ ಮಣ್ಣಿನ ರಾಶಿಯಲ್ಲಿ ಬಾಲಕಿಯ ಶವ ಪತ್ತೆಯಾಯಿತು.
ಪೊಲೀಸರು ಸ್ಥಳಕ್ಕೆ ಧಾವಿಸಿ ಶ್ವಾನ ದಳ ಹಾಗೂ ತಾಂತ್ರಿಕ ತಂಡದ ಸಹಾಯದಿಂದ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಗಮನಾರ್ಹವೆಂದರೆ, ಇದೇ ಪ್ರದೇಶದಲ್ಲಿ ಕೇವಲ ಎರಡು ದಿನಗಳ ಹಿಂದೆ ರೌಡಿಶೀಟರ್‌ನ ಸಹವಾಸಿಯ ಕೊಲೆ ಪ್ರಕರಣವೂ ನಡೆದಿತ್ತು. ಈ ಹಿನ್ನೆಲೆ ಪೊಲೀಸರು ಘಟನೆಯ ಕುರಿತು ಗಂಭೀರ ತನಿಖೆ ಕೈಗೊಂಡಿದ್ದು, ಹಕ್ಕಿಪಿಕ್ಕಿ ಸಮುದಾಯದ ವ್ಯಾಪಾರಿಗಳಿಗೆ ವಿಚಾರಣೆ ನಡೆಸುತ್ತಿದ್ದಾರೆ.
Comments
Post a Comment